ಕರುನಾಡಿನಲ್ಲಿ ಕನ್ನಡ ಕಟ್ಟುವ ಕೆಲಸವಾಗಬೇಕು : ಎಸಿ ಅಬೀದ್ ಗದ್ಯಾಳ.
ಇಂಡಿ : ಕನ್ನಡ ನಾಡು ನುಡಿ ಜಾಗೃತಿಗಾಗಿ ಜಾಥಾ ಹೊರಟಿರುವ ಕನ್ನಡಮ್ಮನ ರಥಯಾತ್ರೆಗೆ ಇಂಡಿಯಲ್ಲಿ ನೂರಾರು ಕನ್ನಡ ಅಭಿಮಾನಿಗಳು, ಸಾವಿರಾರು ಶಾಲಾ ಕಾಲೇಜು ಮಕ್ಕಳು, ನೂರಾರು ಪೂರ್ಣ ಕುಂಭ ಹೊತ್ತ ಸುಮಂಗಲಿಯರು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ರಕ್ಷಣಾ ವೇದಿಕೆ ಮತ್ತು ತಾಲೂಕು ಆಡಳಿತ ಸಹಯೋಗದೊಂದಿಗೆ ಬಹು ಅದ್ದೂರಿಯಾಗಿ ಕನ್ನಡಾಂಬೆಯ ರಥಯಾತ್ರೆ ಜರುಗಿತು.
ಪಟ್ಟಣದಲ್ಲಿ ಸೋಮವಾರ ರಥಯಾತ್ರೆಯಲ್ಲಿ ಇಂಡಿ ನಗರದ ಜನರ ಮೈ ಮನಗಳಲ್ಲಿ ಪುಟಿದೇಳುವಂತೆ ಭಾಷಾಭಿಮಾನದ ಜೈ ಘೋಷಗಳ ಮೂಲಕ ಕರತಾಡನದೊಂದಿಗೆ ಕನ್ನಡದ ಇತಿಹಾಸ ಸಾರುವ ಗೀತೆಗಳ ಗಾನ ಗುಂಜನದಿಂದ ನೆರೆದ ಜನಸ್ತೋಮದಲ್ಲಿ ಮೈನವೀರೇಳಿಸುವ ವಿದ್ಯುತ್ ಸಂಚಾರ ಮೂಡಿಸಿ ರಥಯಾತ್ರೆ ಹೊಸ ಇತಿಹಾಸ ಬರೆಯಿತು.
ನಗರ ಸೇವಲಾಲ್ ವೃತ್ತ ದಲ್ಲಿ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರವಿರುವ ರಥಯಾತ್ರೆಗೆ ಫಲ-ಪುಷ್ಪ ಲಿಂಬೆ ಹಾರನಿಂದ ಪೂಜಿಸಿ ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಸ್ವಾಗತಿಸಿ, ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಬಹು ವಿಶೇಷವಾಗಿ ಗೊಂಬೆ ಕುಣಿತ, ಕರಡಿ ಕುಣಿತ, ಹಲಗೆ ಮೇಳ, ಕರಡಿ ಮಜಲು, ಡೊಳ್ಳು ಕುಣಿತ ನೂರಾರು ಕನ್ನಡ ಭಾವುಟ ಹಿಡಿದು ಕನ್ನಡಾಭಿಮಾನಿಗಳ ಪಾಲ್ಗೊಳ್ಳುವಿಕೆಯಿಂದ ನಗರದಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರು ಮಾತಾನಾಡಿ ಸರ್ವ ಜನಾಂಗದ ಶಾಂತಿ ತೋಟವಾಗಿರುವ ಕರುನಾಡಿನಲ್ಲಿ ಇಂದು ಕನ್ನಡ ಕಟ್ಟುವ ಕೆಲಸವಾಗಬೇಕಾಗಿದೆ. ಕನ್ನಡ ಭಾಷೆಯ ಸಲುವಾಗಿ ಅನೇಕ ಮಹನೀಯರು ತಮ್ಮ ಬದುಕನ್ನು ಮುಡಿಪಾಗಿಟ್ಟು ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಕನ್ನಡದ ಮೊಟ್ಟ ಮೊದಲ ದೊರೆ ಮಯೂರ ವರ್ಮನಿಂದ ಶೂರವಾದ ಕನ್ನಡದ ಜೈತ್ರಯಾತ್ರೆ ಇಂದು ಮುಂದುವರೆಯಬೇಕಾಗಿದೆ.
ವಿಶ್ವಲಿಪಿಗಳ ರಾಣಿ ಕನ್ನಡ ಭಾಷೆಯ ಬಗ್ಗೆ ಹೆಮ್ಮೆಯೊಂದಿಗೆ ಭಾಷಾಭಿಮಾನ ಪ್ರತಿಯೊಬ್ಬ ಕನ್ನಡಿಗರು ಬೆಳೆಸಿಕೊಳ್ಳಬೇಕು.
ಕನ್ನಡ ನಾಡು,ನುಡಿ, ಜಲ ಸಂರಕ್ಷಣೆಗಾಗಿ ಪ್ರತಿಯೊಬ್ಬ ಕನ್ನಡಿಗರೂ ಕಂಕಣಬದ್ದರಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಬಿ ಎಸ್ ಕಡಕಬಾವಿ, ಇಒ ಬಾಬು ರಾಠೋಡ, ಕ್ಷೇತ್ರ ಶಿಕ್ಷಣ ಅಧಿಕಾರಿ ಟಿ. ಎಸ್ ಆಲಗೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ್ ಮೋಮಿನ್, ಕ.ಸಾ.ಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ,ಕರವೇ ಅಧ್ಯಕ್ಷ ಶೀವು ಮಲಕಗೊಂಡ, ಬಾಳು ಮುಳಜಿ, ಫಯಾಜ್ ಬಾಗವಾನ, ಆನಂದ ಪವಾರ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ,ಅಯೂಬ್ ಬಾಗವಾನ, ದೇವೇಂದ್ರ ಕುಂಬಾರ ಅಸ್ಲಂ ಕಡಣಿ ಇನ್ನೂ ಅನೇಕರು ಸೇರಿದಂತೆ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಅಧಿಕಾರಿಗಳು, ಕನ್ನಡಪರ ಸಂಘಟನೆ ಮುಖಂಡರು ಮೆರವಣಿಗೆಯಲ್ಲಿ ಉಪಸ್ಥಿತರಿದ್ದು
ಸಂಭ್ರಮಿಸಿದರು .