ರಾಯಚೂರು: ನಾರಾಯಣಪೂರು ಬಲದಂಡೆ ೯ಎ ಕಾಲುವೆ ಕಾಮಗಾರಿ ಕೂಡಲೇ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ೯ಎ ಕಾಲುವೆ ಹೋರಾಟ ಸಮಿತಿ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದರು.
ನಾರಾಯಣಪೂರ ಬಲದಂಡೆ ೯ಎ ಕಾಲುವೆ ಮಂಜೂರಾಗಿ ದಶಕಗಳೇ ಕಳೆದರೂ, ಇಲ್ಲಿವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ವಡವಟ್ಟಿ ಶಾಖಾ ವಿಭಾಗದ ೯ಎ ಮುಖ್ಯ ಕಾಲುವೆಗೆ ಒಳಪಡುವ ೧೩ ಉಪ ಕಾಲುವೆಗಳ ಕಾಮಗಾರಿ ೨೦೧೨ ರಿಂದ ೧೪ ರ ಅಂತ್ಯದ ವೇಳೆಗೆ ಪೂರ್ಣಗೊಳಿಸಿ, ನೀರು ಹರಿಸಬೇಕಾಗಿತ್ತು.
ಆದರೆ, ಜನಪ್ರತಿನಿಧಿಗಳು, ರಾಜಕಾರಣಿಗಳು ಹಾಗೂ ಗುತ್ತೇದಾರರ ಹಿತಾಸಕ್ತಿ ಕೊರತೆ ನಿರ್ಲಕ್ಷ್ಯದಿಂದ ಪೂರ್ಣಗೊಂಡಿಲ್ಲವೆಂದು ದೂರಿದರು. ಕಾಮಗಾರಿಗೆ ನೀಡಿದ ಕೆಲ ಉಪ ಕಾಲುವೆಗಳ ಪೈಕಿ ಕಲಂಗೇರಾ ಮತ್ತು ಯು.ಗುಡದಿನ್ನಿ ಗ್ರಾಮಗಳ ಮಧ್ಯೆ ಬರುವ ಬಂಡಿದಾರಿ ಬಯಲು ಪ್ರದೇಶದಲ್ಲಿ ಗುತ್ತಿಗೆದಾರರು ಅರ್ಥ್‌ವರ್ಕ್ ಮತ್ತು ಲೈವಿಂಗ್ ಕಾಮಗಾರಿ ಪೂರ್ಣಗೊಳಿಸಿಲ್ಲ.
ಕಾಮಗಾರಿ ವಿಳಂಬದಿಂದ ಮಾಡಿದ ಉಪ ಕಾಲುವೆಗಳ ಮಣ್ಣಿನಿಂದ ಹೂತು ಹೋಗಿ, ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆಂದರು. ಕೋತಾಪೂರ, ಹೀರೆಹಣಗಿ, ಚಿಕ್ಕಹಣಗಿ, ಕವಿತಾಳ, ಚಿಕ್ಕಬಾದರದಿನ್ನಿ, ಗೊಲ್ಲದಿನ್ನಿ, ಕಲಂಗೇರಾ, ಗುಡದಿನ್ನಿ ಗ್ರಾಮಗಳಿಗೆ ಹರಿಸಬೇಕಾಗಿದ್ದ ನೀರು ಕೋತಾಪೂರ, ಕುರಕುಂದಾ ಮಧ್ಯೆ ಭಾಗದಲ್ಲಿರುವ ಕೆರೆಗೆ ಹರಿದು ಬಂದು ಕೆಲ ರೈತರ ಹೊಲಗಳಿಗೆ ನುಗ್ಗಿ, ಬೆಳೆಗಳನ್ನು ನಷ್ಟ ಮಾಡಿ, ಹಳ್ಳ ಮತ್ತು ಕೆರೆಗೆ ಸೇರಿ ಪೋಲಾಗುತ್ತಿವೆ. ಇದರಿಂದ ರೈತರಿಗೆ ನೀರು ಸದ್ಬಳಕೆಯಾಗದೇ, ತೊಂದರೆ ಅನುಭವಿಸುತ್ತಿದ್ದಾರೆಂದರು. ಕೂಡಲೇ ೯ಎ ಉಪ ಕಾಲುವೆಯ ರಿ-ಟೆಂಡರ್ ಕರೆದು, ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಶಂಕರಗೌಡ, ಶಿವಕುಮಾರಗೌಡ, ಮಣಿಪಾಲ್ ರೆಡ್ಡಿ, ಶರಣು ಗೋಪಾಲ, ಶರಣಪ್ಪ, ಎಂ.ಶಿವಕುಮಾರ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.