ರಾಯಚೂರು: ಕೊರೊನಾ ತಡೆಗೆ ಸರ್ಕಾರ ಶನಿವಾರ ಹಾಗೂ ಭಾನುವಾರ ಲಾಕ್ಡೌನ್ ಜಾರಿಗೊಳಿಸಿದ್ದರೂ ದೇವದುರ್ಗ ತಾಲೂಕಿನ ಜಾಲಹಳ್ಳಿ ಠಾಣೆ ಪಿಎಸ್‌ಐ ಮುದ್ದುರಂಗಪ್ಪ ಠಾಣೆಯಲ್ಲೇ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಘಟನೆಗೆ ಟೀಕೆ ವ್ಯಕ್ತವಾಗಿದ್ದರಿಂದ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆಗೆ ಎಸ್‌ಪಿ ಬಿ.ನಿಖಿಲ್ ಸೂಚಿಸಿದ್ದಾರೆ. ಘಟನೆ ಸಂಬಂಧ ವ್ಯಾಪಕ ಟೀಕೆ ಕೇಳಿ ಬಂದಿದ್ದರಿಂದ ಎಸ್‌ಪಿ ಕ್ರಮ ಕೈಗೊಂಡಿದ್ದು, ತನಿಖೆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಎಸ್‌ಪಿ ನಿಖಿಲ್. ಬಿ ಹೇಳಿದರು.
ಕೊರೊನಾ ಸಂಬಂಧ ರಾಜ್ಯ ಸರ್ಕಾರ ಶುಕ್ರವಾರ ರಾತ್ರಿ ೮ ರಿಂದ ಸೋಮವಾರ ಬೆಳಗ್ಗೆ ೬ರವರೆಗೆ ವೀಕ್‌ಎಂಡ್‌ಕರ್ಫ್ಯೂ ಜಾರಿಗೊಳಿಸಿದೆ. ಜಾಲಹಳ್ಳಿ ಠಾಣೆ ಪಿಎಸ್‌ಐ ಮುದ್ದುರಂಗಪ್ಪ ಶನಿವಾರ ಸಂಜೆ ಪೊಲೀಸ್ ಠಾಣೆಯಲ್ಲೇ ಬೆಂಬಲಿಗರೊಂದಿಗೆ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದಾರೆ.
ಜನ್ಮದಿನ ಆಚರಣೆ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಪೊಲೀಸರಿಗೆ ಒಂದು, ಜನರಿಗೊಂದು ನಿಯಮ ಎಂಬ ರೀತಿಯಲ್ಲಿ ಟೀಕೆಗಳು ಬಂದಿದ್ದರಿಂದ ತನಿಖೆಗೆ ಆದೇಶ.
ವೀಕೆಂಡ ಲಾಕ್ಡೌನ್ ಜನಸಾಮಾನ್ಯರಿಗೆ ಒಂದು ಕಾನೂನು, ಪೊಲೀಸರಿಗೆ ಇನ್ನೊಂದು ಕಾನೂನು ಎಂದು ಜನರು ಜಾಲತಾಣದಲ್ಲಿ ಪೊಲೀಸ್ ಇಲಾಖೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ ಕಾರಣ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಎಸ್‌ಪಿ ಬಿ.ನಿಖಿಲ್, ಪಿಎಸ್‌ಐ ಮುದ್ದುರಂಗಪ್ಪ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ನಿಯಮ ಉಲ್ಲಂಘಿಸಿ ಠಾಣೆಯಲ್ಲೇ ಜನ್ಮದಿನ ಆಚರಿಸಿಕೊಂಡಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಇನ್ನೂ ವೀಕೆಂಡ್ ಲಾಕ್ಡೌನ್ ಅವಧಿಯಲ್ಲಿ ಜಾಲಹಳ್ಳಿ ಠಾಣೆ ಪಿಎಸ್‌ಐ ಠಾಣೆಯಲ್ಲೇ ಜನ್ಮದಿನ ಆಚರಿಸಿಕೊಂಡಿದ್ದು ತಪ್ಪು. ಈ ಬಗ್ಗೆ ಪಿಎಸ್‌ಐಗೆ ನೋಟಿಸ್ ನೀಡಲಾಗಿದೆ ಎಂದು ಎಸ್ಪಿ ಬಿ.ನಿಖಿಲ್ ತಿಳಿಸಿದರು.