ಪ್ರವಚನಕ್ಕೆ ಬಂದ ಭಕ್ತರಿಗೆ ನಿತ್ಯ ವಿಶೇಷ ಪ್ರಸಾದ
ಇಂಡಿ: ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಲಿಂಗೈಕ್ಯ
ಶ್ರೀ ಸಿದ್ಧಲಿಂಗ ಮಹಾರಾಜರ 96ನೇ ಪುಣ್ಯಾರಾಧನೆಯ ಅಂಗವಾಗಿ ಬಂಥನಾಳ ಶ್ರೀ ಡಾ. ವೃಷಭಲಿಂಗೇಶ್ವರ
ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ನಿತ್ಯ ಸಂಜೆ
ನಡೆಯುತ್ತಿರುವ ಶರಣರ ದರ್ಶನ ಕುರಿತ ಪ್ರವಚನ ಆಲಿಸಲು ಸ್ಥಳಿಯ ಹಾಗೂ ಸುತ್ತಲ ಗ್ರಾಮದ ಸಹಸ್ರಾರು ಭಕ್ತರು ಆಗಮಿಸುತ್ತಿದ್ದು, ಪ್ರವಚನ ಆಲಿಸಲು ಬಂಧ
ಭಕ್ತರಿಗೆ ವಿಶೇಷ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ.
ಕಳೆದ ಸೆ.20 ರಂದು ಆರಂಭವಾದ ಪ್ರವಚನ ಸೋಮವಾರದಂದು 13ನೇ ದಿನದಲ್ಲಿ ಮುಂದುವರೆದಿದೆ. ಈ ದಿನ ಸಂಜೆ ತುಂಗಳದ ಮಾತೋಶ್ರೀ ಅನುಸೂಯಾ – ದೇವಿ ಅಮ್ಮನವರು ನೀಡಿದ ಪ್ರವಚನ ಕಾರ್ಯಕ್ರಮಕ್ಕೆ ಸುತ್ತಲ ಬರಗುಡಿ, ಲೋಣಿ ಕೆ.ಡಿ, ಆಳೂರ, ಅಹಿರಸಂಗ, ಮಾವಿನಹಳ್ಳಿ ಹಾಗೂ ಸ್ಥಳೀಯ ಸರ್ವಧರ್ಮದ ಸಹಸ್ರಾರು ಭಕ್ತರು ತಂಡೋಪ ತಂಡವಾಗಿ ಮಠಕ್ಕೆ ಆಗಮಿಸಿದ ಪರಿಣಾಮ ಮಠದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ.
ತಮ್ಮ ಕೆಲಸ ಕಾರ್ಯ, ಟಿ.ವಿ ಧಾರವಾಹಿಯನ್ನು ಬದಿಗೊತ್ತಿ, ಖಾಸಗಿ ವಾಹನ, ಬೈಕ್ ಮೂಲಕ ದಾಖಲೆಯ ಪ್ರಮಾಣದಲ್ಲಿ ಆಗಮಿಸಿದ ಭಕ್ತರಿಂದ ಮಠ ತುಂಬಿ ತುಳುಕಿ ಭಾವೈಕ್ಯತೆಯ ಸಂಗಮದಂತೆ ಕಂಗೊಳಿಸುತ್ತಿತ್ತು.
ಇತ್ತೀಚೆಗೆ ಇಷ್ಟೊಂದು ಬ್ರಹತ್ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದು ಇದೇ ಮೊದಲು. ಹೀಗಾಗಿ ಭಕ್ತರು ದೂರದಲ್ಲಿ ಕುಳಿತು ಪ್ರವಚನ ಆಲಿಸಲು ಮಠದ ಒಳ ಆವರನದಲ್ಲಿ ಎಲ್‍ಇಡಿ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಪ್ರವಚನ ಮುಕ್ತಾಯದ ಬಳಿಕ ಬಂದ
ಭಕ್ತರು ಹಾಲುಗ್ಗಿ, ಬಜೆ, ಹಪ್ಪಳ, ರುಚಿಕಟ್ಟಾದ ಸಾಂಬಾರು, ಅನ್ನ ಪ್ರಸಾದ ಸವಿದು ಧನ್ಯತೆಯ ಭಾವ ಅನುಭವಿಸಿದರು.
ಪ್ರವಚನ ಪ್ರಾರಂಭದ ದಿನದಿಂದಲೂ ನಿತ್ಯವೂ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದ್ದು, ಈ ಹಿಂದೆ ಕೆಲ ಭಕ್ತರೇ ಒಗ್ಗೂಡಿ ಪ್ರವಚನ ಆಲಿಸಿದವರಿಗೆ ಪಾಯಸ,
ಬಾಲುಶ್ಯಾ, ಕರಿಗಡಬು, ತುಪ್ಪ, ಶೇಂಗಾದ ಹೋಳಿಗೆ ತುಪ್ಪ, ಹೀಗೆ ನಾನಾ ತರಹದ ವಿಶೇಷ ಪ್ರಸಾದ ಸಿದ್ದಪಡಿಸಿ ಭಕ್ತರಿಗೆ ವಿತರಿಸಿ, ಅಳಿಲು ಸೇವೆ ಸಲ್ಲಿಸಿ ನಿತ್ಯ ದಾಸೋಹ ಕೇಂದ್ರದಲ್ಲಿ ಶ್ರಮಿಸುತ್ತಿದ್ದಾರೆ. ಇದೇ ಅಕ್ಟೋಬರ್ 6 – ರಂದು ಸಂಜೆ ಈ ಪ್ರವಚನ ಕಾರ್ಯಕ್ರಮದ ಮಹಾಮಂಗಲೋತ್ಸವ ನಡೆಯಲಿದೆ.