ಯಾದಗಿರಿ: ವಡಗೇರಾ ತಾಲ್ಲೂಕಿನ ಕುರಿಹಾಳ ಗ್ರಾಮದ ಸಕಿಪ್ರಾ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕ ಜ್ಯೋತಿನಾಯ್ಕ್ ಅವರಿಗೆ ಗ್ರಾಮಸ್ಥರು ಅದ್ದೂರಿಯಾಗಿ ಅಭಿನಂದಿಸಿ ಬೀಳ್ಕೊಟ್ಟರು.
ಶಿಸ್ತುಬದ್ಧ ಸೇವೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಬೆಳೆಸಿ, ಕಲಿಕೆಯಲ್ಲಿ ಗುಣಮಟ್ಟ ತಂದ ಶಿಕ್ಷಕರ ಸೇವೆಯನ್ನು ಗ್ರಾಮಸ್ಥರು ನೆನೆದರು. ಅವರ ಮುಂದಿನ ಜೀವನ ಸುಖಕರವಾಗಿರಲೆಂದು ಶುಭ ಹಾರೈಸಿದರು. ಹಾಗೂ ಇದೇ ವೇಳೆ ಊರಿನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು. ಕುರಿಹಾಳ ಚಿಕ್ಕ ಗ್ರಾಮವಾದರೂ, ಅನೇಕ ಸರ್ಕಾರಿ ನೌಕರರು ಹಾಗೂ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಹಲವರಿದ್ದಾರೆ. ಈ ವೇಳೆ ಎಲ್ಲರನ್ನು ಸ್ಮರಿಸಲಾಯಿತು.
ಇದೇ ವೇಳೆ ಮಾತನಾಡಿದ ಶಿಕ್ಷಕ ಜ್ಯೋತಿನಾಯ್ಕ್, ಶಾಲೆಯಲ್ಲಿ ತಮ್ಮ ಸೇವೆಯ ಕುರಿತು ಮಾತನಾಡಿ ವಿದ್ಯಾರ್ಥಿಗಳ ಪ್ರೀತಿ ಕಂಡು ಭಾವುಕರಾದರು. ಅವರು ಸ್ವತಃ ಕವಿಗಳು ಹಾಗೂ ಸಾಹಿತಿಗಳು ಆಗಿದ್ದು, ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಬಿಳ್ಹಾರ್ ಶಾಲೆಯ ಶಿಕ್ಷಕರಾದ ಮಲ್ಲೇಶ್ ಅವರು ತುಂಬಾ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.