ದೇವನೊಬ್ಬ ನಾಮ ಹಲವು : ಅನಸೂಯಾದೇವಿ
ಇಂಡಿ: ದೇವನೊಬ್ಬ ನಾಮ ಹಲವು. ದೇವರಿಗೆ ಹಲವು ನಾಮಗಳು. ನಂಬಿದ ಭಕ್ತನಿಗೆ ದೇವನೊಬ್ಬನೇ, ಹಾಗೇಯೇ ಪತಿವೃತೆಗೆ ಪತಿ ಒಬ್ಬನೇ ಎಂದು ಪ್ರವಚನಕಾರ ತುಂಗಳದ ಸಿದ್ಧಲಿಂಗ ಶಾಂಭವಿ ಆಶ್ರಮದ ಮಾತೋಶ್ರೀ ಅನಸೂಯಾದೇವಿ ಹೇಳಿದರು.
ತಾಲೂಕಿನ ಲಚ್ಯಾಣದಲ್ಲಿ ಬರುವ ಅಕ್ಟೋಬರ್ ೬
ಹಾಗೂ ೭ ರಂದು ಜರುಗಲಿರುವ ಲಿಂ. ಶ್ರೀ ಸಿದ್ಧಲಿಂಗ ಮಹಾರಾಜರ ೯೬ನೇ ಪುಣ್ಯಾರಾಧನೆಯ ಅಂಗವಾಗಿ ಭಾನುವಾರ ೫ನೇ ದಿನದಲ್ಲಿ ಮುಂದುವರೆದ “ಶರಣರ
ದರ್ಶನ ಕುರಿತ ಪ್ರವಚನ” ಕಾರ್ಯಕ್ರಮದಲ್ಲಿ ಪ್ರವಚನ – ಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ಪರಮಾತ್ಮನ ಅನುಗ್ರಹ ಆದರೆ ಒಣಗಿದ ಗಿಡವು ಕೂಡ ಚಿಗುರುತ್ತದೆ. ಶರಣರಿಗೆ ಆಡಂಬರದ ಅವಶ್ಯಕತೆ ಇಲ್ಲ. ಗುರುವಿನ ಕೃಪೆ ಆದರೆ ಕೊರಡು ಕೊನರುವದಯ್ಯಾ. ಗುರು ಮನಸ್ಸು ಮಾಡಿದರೆ ಏನೆಲ್ಲ ಸಾಧ್ಯ. ಗುರುವಿನ ಮಾತಿನ ಮೇಲೆ ನಂಬಿಕೆ ಇಡಬೇಕು. ಗುರುವಿನ ಕೃಪೆ ಆದರೆ ವಿಷ ಅಮೃತವಾಗುವದು ಎಂದರು.
ಇದೇ ಸಂದರ್ಭದಲ್ಲಿ ಒಂದು ದಿನದ ದಾಸೋಹ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕ ವಿಠ್ಠಲ ಕರಾಳೆ ಹಾಗೂ ಲಿಂ. ಸಿದ್ಧಲಿಂಗ ಮಹಾರಾಜರು ಕಾಯಕ ಮಾಡಿದ ಕನ್ನೊಳ್ಳಿಯ ಮನೆತನದವರನ್ನು ಪೂಜ್ಯರು ಸನ್ಮಾನಿಸಿ ಗೌರವಿಸಿದರು.
ಬಂಥನಾಳ ಹಾಗೂ ಲಚ್ಯಾಣ ಮಠದ ಪೀಠಾಧೀಶ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳು ಹಾಗೂ ಅಗರಖೇಡದ ಅಭಿನವ ಪ್ರಭುಲಿಂಗ ದೇವರು ಸಾನಿಧ್ಯವಹಿಸಿದ್ದರು. ಸಂಗೀತ ಶಿಕ್ಷಕ ಮುರಳಿಧರ ಬಜಂತ್ರಿ ಹಾರ್ಮೊನಿಯಂ ನುಡಿಸಿ, ಭಕ್ತಿ ಗೀತೆ ಹಾಡಿದರು.
ಮಹಾದೇವ ಹೂಗಾರ ತಬಲಾ ಸಾಥ್ ನೀಡಿದರು.
ಬಳಿಕ ಪ್ರವಚನಕ್ಕೆ ಬಂದ ಸರ್ವ ಭಕ್ತರಿಗೆ ಇಲ್ಲಿನ ಮಹಾದಾಸೋಹ ಕೇಂದ್ರದಲ್ಲಿ ಬಾಲುಶ್ಯಾ, ಅನ್ನ, ಸಾಂಬರ ಪ್ರಸಾದ ವಿತರಿಸಲಾಯಿತು.