ರಾಯಚೂರು: ವೇದಿಕೆ ಮೂಲಕ ನಾನು ಯಾವುದೇ ಭರವಸೆ ನೀಡಿದ ನಂತರ ಸ್ವಯಂ ದೇವರು ಬಂದು ಬೇಡವೆಂದರೂ, ಅದನ್ನು ಈಡೇರಿಸದೇ ಬಿಡುವುದಿಲ್ಲ ಎಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು, ಇನ್ನೂ ಕೆಲವೇ ದಿನಗಳಲ್ಲಿ ೪೩೦೦ ಮನೆಗಳ ಹಕ್ಕುಪತ್ರ ನಾನು ಸ್ವಯಂ ನಿಮ್ಮ ಮನೆ ಬಾಗಿಲಿಗೆ ಬಂದು ಕೊಡುವ ಭರವಸೆಯನ್ನು ನೀಡಿದರು. ಅವರಿಂದು ಆಶಾಪೂರು ರಸ್ತೆಯಲ್ಲಿರುವ ಕೆಕೆ ರೆಡ್ಡಿ ಕಲ್ಯಾಣ ಮಂಟಪದಲ್ಲಿ ಶಾಸಕರ ನಡೆ ಜನ ಸಂಪರ್ಕದೆಡೆ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ಮನೆಗಳ ವಿತರಣೆ ಕಾರ್ಯಕ್ರಮ ಪಕ್ಷಾತೀತವಾಗಿ ನಿರ್ವಹಿಸುತ್ತೇನೆ. ಪಕ್ಷ, ಲೀಡರ್, ನಾನು ಎಂಎಲ್‌ಎ, ನಗರಸಭೆ ಸದಸ್ಯರು ಯಾರು ಇರದಂತೆ ಬಡ ಜನರಿಗೆ ನೇರವಾಗಿ ಯೋಜನೆ ಮುಟ್ಟುವಂತೆ ಮಾಡುವ ಉದ್ದೇಶ ಹೊಂದಿದ್ದೇನೆ. ಯಾರು ಗುಡಿಸಲಿನಲ್ಲಿ ವಾಸವಾಗಿದ್ದಾರೋ ಆ ವ್ಯಕ್ತಿ ಮನೆ ಕಟ್ಟಿಕೊಡುವ ಜವಾಬ್ದಾರಿ ನನ್ನದು. ಕಳೆದ ಅವಧಿಯಲ್ಲಿ ೨ ಸಾವಿರ ಮನೆಗಳನ್ನು ತಂದಿದ್ದೇನೆ. ಈ ಅವಧಿಯಲ್ಲಿ ೪೩೦೦ ಮನೆಗಳು ಮಂಜೂರಾಗಿವೆ. ಕೆಲವೇ ದಿನಗಳಲ್ಲಿ ಎಲ್ಲಾ ಕೊಳಚೆ ಪ್ರದೇಶಗಳಿಗೆ ಬಂದು ಈ ಕಾರ್ಯಕ್ರಮಕ್ಕೆ ಪೂಜೆ ನಿರ್ವಹಿಸಿ, ಹಕ್ಕುಪತ್ರ ನೀಡುತ್ತೇನೆ. ಸ್ಲಂ ನಿವಾಸಿಗಳು ಸ್ವಂತ ಮನೆ ಹೊಂದುವ ಬಹುದಿನಗಳ ಕನಸು ಈಡೇರಿಸುವ ಜವಾಬ್ದಾರಿ ನನ್ನದು. ಬಡ ಜನರಿಗೆ ಸ್ವಂತ ಮನೆ ಸಿಕ್ಕಿದಾಗ ನನಗೆ ಸಂತೃಷ್ಟವಾಗುತ್ತದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಸಂಕಷ್ಟ ಆರ್ಥಿಕ ಸಮಸ್ಯೆಗೆ ಕಾರಣವಾಗಿದೆ. ಇದರ ಮಧ್ಯೆ ಯೋಜನೆಗಳನ್ನು ರೂಪಿಸಬೇಕಾಗಿದೆ. ಒಂದು ವೇಳೆ ಕೊರೊನಾ ಸಂಕಷ್ಟ ಇಲ್ಲದಿದ್ದರೇ, ರಾಯಚೂರನ್ನು ಜೋಪಡಿ ಮುಕ್ತ ಕನಸು ನನಸು ಮಾಡುತ್ತಿದ್ದೆ. ಆದರೂ, ಈಗ ನಿಮ್ಮ ಸ್ವಂತ ಮನೆಯ ಆಸೆಯನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಳೆದ ಎರಡು ಅವಧಿಯಲ್ಲಿ ನನಗೆ ಪ್ರೀತಿಯ ಅಭಿಮಾನ ನೀಡಿ, ಗೆಲ್ಲಿಸಿದ್ದೀರಿ. ಇದೆ ಅಭಿಮಾನ ಮುಂದಿನ ದಿನಮಾನಗಳಲ್ಲಿ ಇರಲಿ ಎಂದು ಆಶಿಸುತ್ತಾ, ಸಾರ್ವಜನಿಕರು ಕಛೇರಿಯ ಬಾಗಿಲಿಗೆ ಅಲೆಯದಂತೆ ಅವರ ಮನೆ ಬಾಗಿಲಿಗೆ ಯೋಜನೆ ದೊರೆಯುವಂತೆ ಮಾಡುತ್ತೇನೆ. ಕಳೆದ ಅನೇಕ ವರ್ಷಗಳಿಂದ ಇಲ್ಲಿಯ ಕೊಳಚೆ ಪ್ರದೇಶದ ನಿವಾಸಿಗಳು ಹಕ್ಕುಪತ್ರಕ್ಕಾಗಿ ಕನಸು ಕಾಣುತ್ತಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಹಕ್ಕುಪತ್ರಗಳನ್ನು ನೀಡುವ ಪ್ರಕ್ರಿಯೆ ಆರಂಭಿಸುತ್ತೇನೆ. ನಿಮ್ಮ ಹೆಸರಿಗೆ ಮನೆ ನೋಂದಾಯಿಸಿ, ದಾಖಲೆ ನೀಡಲಾಗುತ್ತಿದೆ. ಎಸ್ಸಿ, ಎಸ್ಟಿ ಜನಾಂಗ ಸಾವಿರ ರೂ., ಸಾಮಾನ್ಯ ಜನಾಂಗ ಎರಡು ಸಾವಿರ ನೀಡಿದರೇ, ದಾಖಲೆಗಳು ಅವರ ಮನೆ ಬಾಗಿಲಿಗೆ ಬರುವಂತೆ ಮಾಡುತ್ತೇನೆ. ಜನರ ಮನೆ ಬಾಗಿಲಿಗೆ ಆಡಳಿತ ಬಂದರೇ ಪ್ರಜಾಪ್ರಭುತ್ವ. ಜನರು ಕಛೇರಿಗಳ ಬಾಗಿಲಿಗೆ ಹೋದರೇ, ಸರ್ವಾಧಿಕಾರಿ ಆಡಳಿತವಾಗುತ್ತದೆ. ಈ ರೀತಿಯ ತೊಂದರೆ ಜನರಿಗೆ ಎದುರಿಸಬಾರದೆಂಬ ಉದ್ದೇಶದಿಂದ ಈ ಜನ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರು ಕಛೇರಿಗಳಿಗೆ ಅಲೆಯುವುದು, ಅಧಿಕಾರಿಗಳು ಸಭೆಯಲ್ಲಿರುವುದಾಗಿ ಮತ್ತು ಮರಳುವುದು ಈ ರೀತಿಯ ತೊಂದರೆಗಳು ನಿವಾರಿಸುವ ಉದ್ದೇಶದಿಂದ ನಿಜವಾದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಜನರಿಗೆ ತಲುಪಲಿ ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿಯಾತಲಾಬ್ ಕಳೆದ ಮೂರು ತಿಂಗಳಿಂದ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಿಯಾತಲಾಬ್, ಎಲ್‌ಬಿಎಸ್ ನಗರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಲ್ಲಿಯ ಅನೇಕ ಜನರಿಗೆ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ನೀಡಲಾಗಿದೆಂದು ಹೇಳಿದರು. ಇಂದಿನ ಜನ ಸಂಪರ್ಕ ಸಭೆಯಲ್ಲಿ ವಿಕಲಚೇತನರಿಗೆ ಸೌಲಭ್ಯ, ಪಿಂಚಣಿ, ವೃದ್ಧಾಪ್ಯ ವೇತನ, ಭಾಗ್ಯಲಕ್ಷ್ಮೀ ಬ್ರಾಂಡ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಶಾಸಕರ ಆದೇಶದ ಮೇರೆಗೆ ಸ್ಥಳದಲ್ಲಿಯೇ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಭೀಮಣ್ಣ ಮಂಚಾಲಿ, ರವೀಂದ್ರ ಜಲ್ದಾರ್, ಕಡಗೋಳ ಆಂಜಿನೇಯ್ಯ, ಮುಕ್ತಿಯಾರ, ಸನ್ನಿಬಿನ್ನಿ ಸೇರಿದಂತೆ ಅನೇಕ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರು ಹಾಗೂ ನಗರಸಭೆ ಸದಸ್ಯರು ಪಾಲ್ಗೊಂಡಿದ್ದರು.



















