ಸೆ 27ರಂದು ಉಚಿತ ಸಾಮೂಹಿಕ ವಿವಾಹ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ..!
ಹನೂರು: ತಾಲೂಕಿನ ಶ್ರೀ ಮಲೆ ಮಾದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸೆಪ್ಟೆಂಬರ್ 27ರಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ದರಾಮಯ್ಯ ರವರು ಭಾಗಿಯಾಗಲಿದ್ದಾರೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಹಾಗೂ ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಸಿದ್ದರಾಮಯ್ಯನವರು ಸಾಮೂಹಿಕ ವಿವಾಹದಲ್ಲಿ ಭಾಗಿಯಾಗುತ್ತಿರುವುದರಿಂದ ಸೆಪ್ಟೆಂಬರ್ 25 ರ ಬದಲಾಗಿ ಸೆಪ್ಟೆಂಬರ್ 27ರಂದು ಸಾಮೂಹಿಕ ವಿವಾಹಕ್ಕೆ ದಿನಾಂಕ ನಿಗದಿ ಮಾಡಲಾಗಿದೆ.
ಪ್ರಾಧಿಕಾರದ ಸಭೆ: ಸಾಮೂಹಿಕ ವಿವಾಹ ಕಾರ್ಯಕ್ರಮ ಮುಗಿದ ನಂತರ ಮೊಟ್ಟ ಮೊದಲ ಬಾರಿಗೆ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ನೀಡಲಿದ್ದಾರೆ.
ವಧುವಿಗೆ ನಾಲ್ಕು ಗ್ರಾಂ ತೂಕದ ಚಿನ್ನದ ಮಾಂಗಲ್ಯ ಬೆಳ್ಳಿ ಕಾಲುಂಗುರ ಸೀರೆ ಮತ್ತು ರವಿಕೆ, ವರನಿಗೆ ಪಂಚೆ ಶರ್ಟ್ ಟವೆಲ್ ಉಚಿತವಾಗಿ ನೀಡಲಾಗುವುದು ವಧು ವರರಿಗೆ ಉಳಿದುಕೊಳ್ಳಲು ಕೊಠಡಿಗಳ ವ್ಯವಸ್ಥೆ, ಹಾಗೂ ಇವರ ಸಂಬಂಧಿಕರಿಗೆ ಊಟ ತಿಂಡಿ ವ್ಯವಸ್ಥೆಯನ್ನು ದಾಸೋಹದಲ್ಲಿ ಮಾಡಲಾಗಿದೆ.
ಸಿಎಂ 26ರಂದು ವಾಸ್ತವ್ಯ: ಸೆಪ್ಟೆಂಬರ್ 27ರ ಬೆಳಗ್ಗೆ 9. 50 ರಿಂದ 10 20 ಗಂಟೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಸಾಮೂಹಿಕ ವಿವಾಹ ನಡೆಯಲಿರುವುದರಿಂದ ಬೆಳಗ್ಗೆ ಬೆಂಗಳೂರಿನಿಂದ ಬರಲು ತಡವಾಗುವುದರಿಂದ ಸೆಪ್ಟೆಂಬರ್ 26ರಂದೇ ಮಲೆ ಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.
ಒಟ್ಟರೆ ಅನ್ಯಕಾರಣಗಳಿಂದ ಮೂರು ಬಾರಿ ಮುಂದೂಡಲಾಗಿದ್ದ ಸಾಮೂಹಿಕ ವಿವಾಹ ಸೆಪ್ಟೆಂಬರ್ 27ರಂದು ಪೂರ್ಣಗೊಳ್ಳಲಿದ್ದು 67 ಜೋಡಿಗಳು ಹಸೆಮಣೆ ಹೇರಲಿದ್ದಾರೆ. ಕಾರ್ಯಕ್ರಮದಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರಾಧಿಕಾರದ ಉಪಾಧ್ಯಕ್ಷರಾದ ವೆಂಕಟೇಶ್, ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ಶಾಸಕರುಗಳಾದ ಪುಟ್ಟರಂಗಶೆಟ್ಟಿ, ಎ ಆರ್ ಕೃಷ್ಣಮೂರ್ತಿ, ಎಚ್ಎಸ್ ಗಣೇಶ್ ಪ್ರಸಾದ್ ,ಎಮ್ ಆರ್ ಮಂಜುನಾಥ್, ವಿಧಾನಪರಿಷತ್ ಸದಸ್ಯರುಗಳಾದ ಮಧು ಜಿ ಮಾದೇಗೌಡ, ಡಾ. ತಿಮ್ಮಯ್ಯ, ಮರಿತಿಬ್ಬೇಗೌಡ, ಸಿಎನ್ ಮಂಜೇಗೌಡ ಜಿಲ್ಲಾಧಿಕಾರಿಗಳಾದ ಸಿಟಿ ಶಿಲ್ಪನಾಗ್ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಸೇರಿದಂತೆ ಇನ್ನಿತರರು ಭಾಗಿಯಾಗಲಿದ್ದಾರೆ.