ರಾಯಚೂರು.: ನಗರದಲ್ಲಿ ಘನತ್ಯಾಜ್ಯ ವಿಲೇವಾರಿ, ರಸ್ತೆ, ವಿದ್ಯುತ್ ದೀಪ ಮತ್ತು ಕುಡಿವ ನೀರು ಪೂರೈಕೆ ಸುಧಾರಣೆಯಲ್ಲಿ ನಗರಸಭೆ ಅಧಿಕಾರಿಗಳ ವೈಫಲ್ಯದ ಬಗ್ಗೆ ತೀವ್ರ ಅಸಮಾಧಾನಗೊಂಡ ಶಾಸಕ ಡಾ.ಶಿವರಾಜ ಪಾಟೀಲ್ ಮತ್ತು ಜಿಲ್ಲಾಧಿಕಾರಿ ಡಾ.ಅವಿನಾಶ ಮೇನನ್ ಅವರು, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಗಂಭೀರ ಕ್ರಮ ಎದುರಿಸಬೇಕಾಗುತ್ತದೆಂದು ತರಾಟೆಗೆ ತೆಗೆದುಕೊಂಡರು.
ಅವರಿಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಗರಸಭೆ, ೨೪x೭ ಕಾಮಗಾರಿ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ನಡೆದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಸಭೆಯಲ್ಲಿ ಘನತ್ಯಾಜ್ಯ ವಿಲೇವಾರಿ, ಬೀದಿ ದೀಪ ನಿರ್ವಹಣೆ ಮತ್ತು ೨೪x೭ ಕುಡಿವ ನೀರಿನ ಯೋಜನೆ ಅನುಷ್ಠಾನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಡಾ. ಶಿವರಾಜ ಪಾಟೀಲ್ ಅವರು, ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಮತ್ತು ಮೂಲಭೂತ ಸೌಕರ್ಯಗಳನ್ನು ಮುಟ್ಟಿಸುವಲ್ಲಿ ಅಧಿಕಾರಿಗಳು ಸಮರ್ಪಕ ಕಾರ್ಯ ನಿರ್ವಹಿಸುತ್ತಿಲ್ಲವೆಂದು ತರಾಟೆಗೆ ತೆಗೆದುಕೊಂಡರು.
ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಮಹತ್ವದ ನಿರ್ಧಾರ ಈ ಸಂದರ್ಭದಲ್ಲಿ ಕೈಗೊಳ್ಳಲಾಯಿತು. ಕ್ರಿಯಾಯೋಜನೆ ಅನುಮೋದಿಸುವ ಮೂಲಕ ೨೯ ಆಟೋ, ಟಿಪ್ಪರ್, ೨ ಜೆಸಿಬಿ, ಪುಶ್ ಕಾರ್ಡ್ ಟೆಂಡರ್ ಮಾಡಲು ಈ ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದ ಘನತ್ಯಾಜ್ಯ ವಿಲೇವಾರಿಯನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ವಾತಾವರಣದ ವ್ಯವಸ್ಥೆ ದೊರೆಯುವಂತೆ ಮಾಡಬೇಕು ಎಂದು ಆದೇಶಿಸಲಾಯಿತು. ಪರಿಸರ ವಿಭಾಗದ ಕಾರ್ಯ ವೈಖರಿ ಬಗ್ಗೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ತೀವ್ರ ಬೇಸರ ವ್ಯಕ್ತಪಡಿಸಿದರು. ತಕ್ಷಣವೇ ೧೫೦ ಕಾರ್ಮಿಕರನ್ನು ಚರಂಡಿಗಳ ಹೂಳೆತ್ತುವ ಕಾರ್ಯಕ್ಕೆ ನಿಯುಕ್ತಿಗೊಳಿಸುವಂತೆ ಆದೇಶಿಸಲಾಯಿತು.
ನಗರ ವಿದ್ಯುತ್ ದೀಪಗಳ ನಿರ್ವಹಣೆಗೆ ಸಂಬಂಧಿಸಿ ಮತ್ತೊಂದು ಮಹತ್ವದ ನಿರ್ಧಾರ ಈ ಸಂದರ್ಭದಲ್ಲಿ ಕೈಗೊಳ್ಳಲಾಯಿತು. ವಿದ್ಯುತ್ ದೀಪ ನಿರ್ವಹಣೆಗೆ ಚೈತನ್ಯ ಎಲೆಕ್ಟ್ರಿಕಲ್ಸ್ ಉಪ ಗುತ್ತಿಗೆ ನೀಡಿರುವುದನ್ನು ತಕ್ಷಣವೇ ರದ್ದು ಪಡಿಸಬೇಕು. ಮುಖ್ಯ ಗುತ್ತೇದಾರರೇ ವಿದ್ಯುತ್ ನಿರ್ವಹಣೆ ಮಾಡಬೇಕು.
ಹೈದ್ರಾಬಾದ್‌ನಿಂದ ಕಳಪೆ ಮಟ್ಟದ ಉಪಕರಣಗಳ ಪೂರೈಕೆ ಸ್ಥಗಿತಗೊಳಿಸಿ, ಬೆಂಗಳೂರಿನಿಂದಲೇ ಟೆಂಡರ್ ಒಪ್ಪಂದದಂತೆ ವಿದ್ಯುತ್ ಉಪಕರಣಗಳನ್ನು ಪೂರೈಸಬೇಕು. ಅಲ್ಲದೇ, ವಿದ್ಯುತ್ ನಿರ್ವಹಣೆಗೆ ೬ ತಂಡಗಳು ನಿತ್ಯ ಕಾರ್ಯ ನಿರ್ವಹಿಸುವಂತೆ ಸಭೆ ನಗರಸಭೆ ಆಯುಕ್ತರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿತು. ಹೈದ್ರಾಬಾದ್‌ನಿಂದ ಸಾಮಾಗ್ರಿ ಪೂರೈಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ನಗರ ವಿದ್ಯುತ್ ನಿರ್ವಹಣೆ ಸಮರ್ಥವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪ್ರತಿ ವಾರ್ಡಗೆ ೫೦ ಸೋಡಿಯಂ ದೀಪ ಹಾಗೂ ಎಲ್‌ಇಡಿ ದೀಪಗಳನ್ನು ಕೊಡುವಂತೆ ಆದೇಶಿಸಲಾಯಿತು. ಪ್ರತಿ ವಾರ್ಡ್‌ನಲ್ಲೂ ಬೀದಿ ದೀಪಗಳು ಬೆಳಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ನಗರಸಭೆಯಲ್ಲಿ ಕುಡಿವ ನೀರು ಸೇರಿದಂತೆ ಇನ್ನಿತರ ಅಗತ್ಯ ಸೇವೆಗಳಿಗೆ ವಾರ್ಷಿಕ ಟೆಂಡರ್ ಪ್ರಕ್ರಿಯೆ ನಿರ್ವಹಿಸಲು ಇರುವ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಿ, ಕೂಡಲೇ ವಾರ್ಷಿಕ ಟೆಂಡರ್ ಪ್ರಕ್ರಿಯೆ ನಿರ್ವಹಿಸುವಂತೆ ಆದೇಶಿಸಲಾಯಿತು. ಪೈಪ್ ಲೈನ್ ಅಳವಡಿಕೆ, ಬೋರ್‌ವೆಲ್ ರಿಪೇರಿ, ಮೋಟಾರು ವೈಡಿಂಗ್, ಜಿಐ ಗೇಟ್ ವಾಲ್‌ಗಳನ್ನು ಖರೀದಿಸಲು ಈ ಟೆಂಡರ್ ಅತ್ಯಗತ್ಯವಾಗಿದೆ. ೨೪x೭ ಕುಡಿವ ನೀರು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಗಂಭೀರ ಚರ್ಚೆ ನಡೆಸಲಾಯಿತು.
ನಗರದಲ್ಲಿ ಈಗಾಗಲೇ ೨೪x೭ ನೀರು ಸರಬರಾಜಿಗೆ ಕಾಮಗಾರಿ ನಿರ್ವಹಿಸಲಾಗಿದೆ. ಆದರೆ, ಇನ್ನೂವರೆಗೂ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಯಾವ ರೀತಿಯ ಪ್ರಗತಿ ಕಾರ್ಯ ನಡೆದಿದೆ ಎನ್ನುವ ಬಗ್ಗೆ ಸಮಗ್ರ ಮಾಹಿತಿ ಸಭೆಯಲ್ಲಿ ಪಡೆಯಲಾಯಿತು. ಅಲ್ಲದೇ ಒಳ ಚರಂಡಿ ಕಾಮಗಾರಿಯ ಬಗ್ಗೆ ಪರಿಶೀಲಿಸಲಾಯಿತು. ಸಾರ್ವಜನಿಕರಿಗೆ ಕುಡಿವ ನೀರು ಸೇರಿದಂತೆ ಇತರೆ ಮೂಲಭೂತ ಸೌಕರ್ಯ ದೊರೆಕಿಸಿಕೊಡುವಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಲಾಯಿತು.
ಪ್ರತಿ ವರ್ಷ ರಸ್ತೆ ನಿರ್ಮಾಣಕ್ಕೆ ಕೋಟ್ಯಾಂತರ ರೂ.ಅನುದಾನ ತರಲಾಗುತ್ತಿದೆ. ಅನೇಕ ಕಡೆ ನೂತನ ರಸ್ತೆ ನಿರ್ಮಿಸಲಾಗಿದೆ. ಗುಂಡಿ ಬಿದ್ದ ರಸ್ತೆಗಳನ್ನು ಸಂಪೂರ್ಣ ತೆರವುಗೊಳಿಸಿ, ಹೊಸ ರಸ್ತೆ ನಿರ್ಮಿಸವಂತೆ ಸೂಚಿಸಲಾಯಿತು. ಪಟೇಲ್ ರಸ್ತೆಯಲ್ಲಿ ಉತ್ತಮ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಲಾಗಿದೆಂದು ಸಭೆಯಲ್ಲಿ ಹೇಳಿದರು. ಟಿಪ್ಪು ಸುಲ್ತಾನ್ ರಸ್ತೆ ಕಾಮಗಾರಿಯನ್ನು ಶೀಘ್ರ ಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕಿತು ಮಾಡಿದರು. ಸುಧೀರ್ಘ ೩ ಗಂಟೆಗೂ ಅಧಿಕ ಕಾಲ ನಗರದ ಪ್ರಮುಖ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ನಗರಸಭೆಗೆ ಅಗತ್ಯವಾದ ಎಲ್ಲಾ ಅಡೆತಡೆ ನಿವಾರಿಸುವ ಮೂಲಕ ಶಾಸಕ ಡಾ.ಶಿವರಾಜ ಪಾಟೀಲ್ ಅವರು, ನಗರದಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಕ್ರಿಯಗೊಳ್ಳುವಂತೆ ಸೂಚಿಸಿದ್ದರು. ಇಲ್ಲದಿದ್ದರೇ, ಕಟ್ಟುನಿಟ್ಟಿನ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಈ.ವಿನಯಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.