ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಎಂ ಆರ್ ಮಂಜುನಾಥ್..!
ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಎಂ ಆರ್ ಮಂಜುನಾಥ್
ಹನೂರು : ಪ್ರಥಮ ಭಾರಿಗೆ ನೂತನವಾಗಿ ಡಯಾಲಿಸಿಸ್ ಕೇಂದ್ರ ಸೌಲಭ್ಯವನ್ನು ರಾಮಾಪುರ ಆಸ್ಪತ್ರೆಯಲ್ಲಿ ಒದಗಿಸುತ್ತಿರುವ ಹಿನ್ನೆಲೆ ಇದರಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಹನೂರು ತಾಲೂಕಿನ ರಾಮಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬುಧವಾರದಂದು ಭೇಟಿ ನೀಡಿ ಸಾರ್ವಜನಿಕ ಆರೋಗ್ಯ ಸೇವಗಳ ಬಗ್ಗೆ ಪರಿಶೀಲನೆ ನಡೆಸಿ ಬಳಿಕ ಅವರು ಮಾತನಾಡಿದರು.
ರಾಮಾಪುರ ಹೋಬಳಿಯು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು ಕಾಡಂಚಿನಲ್ಲಿ ಗ್ರಾಮಗಳಲ್ಲಿ ಜನರು ವಾಸಿಸುತ್ತಿದ್ದಾರೆ. ಅನಾರೋಗ್ಯ ಸಂದರ್ಭ ಎದುರಾದಲ್ಲಿ ಇಲ್ಲಿನ ರೋಗಿಗಳಿಗೆ ಸಕಾಲಕ್ಕೆ ಸಮರ್ಪಕವಾಗಿ ಚಿಕಿತ್ಸೆ ದೊರಕಿಸಲು ಡಯಾಲಿಸಿಸ್ ಕೇಂದ್ರ ಉಪಯುಕ್ತವಾಗಲಿದೆ ಹೀಗಾಗಿ ಅಧಿಕಾರಿಗಳು ಕಾಳಜಿಯಿಂದ ನಿರ್ವಹಣೆ ಮಾಡಬೇಕು ಎಂದರು.
ಆಸ್ಪತ್ರೆ ಆವರಣದಲ್ಲಿರುವ ಹಳೆಯ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಸರ್ಕಾರದಿಂದ ಆದೇಶ ಬಂದ ಕೂಡಲೇ ವಿವಿಧ ವಸತಿಗೃಹಗಳನ್ನು ನಿರ್ಮಾಣ ಮಾಡಿ, ಆಸ್ಪತ್ರೆ ಸಿಬ್ಬಂದಿಗಳು ತಂಗುವ ವ್ಯವಸ್ಥೆ ಮಾಡಲಾಗುವುದು. ಆಸ್ಪತ್ರೆಗೆ ಬರುವ ರೋಗಿಗಳು ಅಥವಾ ಸಾರ್ವಜನಿಕರ ಜೊತೆ ಸೌಜನ್ಯವಾಗಿ ವರ್ತಿಸಿ ಉತ್ತಮ ಚಿಕಿತ್ಸೆ ನೀಡಬೇಕು ಎಂದರಲ್ಲದೆ ಈ ಹಿಂದೆ ಕರೊನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆಯವರು ಜೀವವನ್ನು ಪಣಕ್ಕಿಟ್ಟು ಜನರಿಗೆ ಆರೋಗ್ಯ ಸೇವೆ ಸಲ್ಲಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ, ತಾಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್, ವೈದ್ಯರಾದ ಡಾ. ರಾಜು, ಡಾ. ಪ್ರವೀಣ್, ಪಿಡಿಒ ಮಹದೇವಸ್ವಾಮಿ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಸೇರಿದಂತೆ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಶಿವಮೂರ್ತಿ, ಮುಖಂಡರಾದ ರಾಜುಗೌಡ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಚೇತನ್ ಕುಮಾರ್ ಎಲ್, ಹನೂರು, ಚಾಮರಾಜನಗರ ಜಿಲ್ಲೆ.