ರಾಯಚೂರು : ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಲ್ಹಾದ್ ಜೋಶಿ ನಗರದ ರಿಮ್ಸ್ ಆಸ್ಪತ್ರೆಯ ಹೆರಿಗೆ ಹಾಗೂ ಮಕ್ಕಳ ಆರೈಕೆ ವಿಭಾಗಕ್ಕೆ ಭೇಟಿ ನೀಡಿ ರೋಗಿಗಳ ಆರೋಗ್ಯವನ್ನು ವಿಚಾರಣೆ ಮಾಡಿ, ಆಸ್ಪತ್ರೆಯ ನೂತನ ಕಟ್ಟಡವನ್ನು ವೀಕ್ಷಣೆ ಮಾಡಿದರು.
ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಇರುವ ಹೆರಿಗೆ ಮತ್ತು ಮಕ್ಕಳ ಆರೈಕೆ ಭಾಗಕ್ಕೆ ಭೇಟಿ ನೀಡಿದ ವೇಳೆ ಅಲ್ಲಿ ರೋಗಿಗಳ ಯೋಗಕ್ಷೇಮ ವಿಚಾರಿಸಿ ಮತ್ತು ಆಸ್ಪತ್ರೆಯಲ್ಲಿನ ಸೌಲಭ್ಯಗಳ ಕುರಿತು ರೋಗಿಗಳಿಂದ ಮಾಹಿತಿ ಪಡೆದರು. ಜೊತೆಗೆ ನೂತನವಾಗಿ ನಿರ್ಮಾಣವಾಗುತ್ತಿರುವ ಆಸ್ಪತ್ರೆಯ ಕಟ್ಟಡ ಕಾಮಗಾರಿಯನ್ನು ಕೂಡ ವೀಕ್ಷಣೆ ಮಾಡಿದರು. ಈ ವೇಳೆ ಉತ್ತಮ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸುವಂತೆ ವೈದ್ಯಾಧಿಕಾರಿಗಳಿಗೆ ಮತ್ತು ಆಸ್ಪತ್ರೆ ನಿರ್ದೇಶಕರಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಬ.ಪಾಟೀಲ್ ಮುನೇನಕೊಪ್ಪ, ಸಂಸದರಾದ ರಾಜಾ ಅಮರೇಶ್ವರ ನಾಯಕ, ಸಂಗಣ್ಣ ಕರಡಿ, ಶಾಸಕ ಡಾ.ಎಸ್.ಶಿವರಾಜ್ ಪಾಟೀಲ್, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೂರ ಜಹಾರ್ ಖಾನಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ರಾಯಚೂರು ಸಹಾಯಕ ಆಯುಕ್ತ ರಜನಿಕಾಂತ್, ರಾಯಚೂರು ತಹಸೀಲ್ದಾರ್ ಡಾ.ಹಂಪಣ್ಣ ಸಜ್ಜನ್, ರಿಮ್ಸ್ ಸಂಸ್ಥೆಯ ನಿರ್ದೇಶಕ ಡಾ.ಬಸವರಾಜ ಪೀರಾಪೂರ ಸೇರಿದಂತೆ ಇತರರು ಇದ್ದರು.