Voice Of Janata DesK News
ತಿರುವನಂತಪುರಂ: ಆಸ್ಟ್ರೇಲಿಯಾ ವಿರುದ್ಧ ತಿರುವನಂತಪುರಂನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 44 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡಿದೆ.
ಇಲ್ಲಿನ ಗ್ರೀನ್ಫೀಲ್ಡ್ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ (53), ಇಶಾನ್ ಕಿಶಾನ್ (52), ರುತುರಾಜ್ ಗಾಯಕ್ವಾಡ್ (58) ಆಕರ್ಷಕ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾದ ಬೃಹತ್ ಮೊತ್ತವನ್ನು ಕಲೆಹಾಕಿದೆ
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಕಲೆಹಾಕಿತು. ಈ ಮೂಲಕ ಆಸೀಸ್ ಪಡೆಗೆ 236 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.
ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಮೊದಲ ವಿಕೆಟ್ಗೆ 77 ರನ್‌ಗಳ ಜತೆಯಾಟವಾಡಿ ಉತ್ತಮ ಆರಂಭ ಒದಗಿಸಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಜೈಸ್ವಾಲ್ ಕೇವಲ 25 ಎಸೆತಗಳಲ್ಲಿ 53 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ತದನಂತರ ಕ್ರೀಸ್ಗೆ ಬಂದ ಇಶಾನ್ ಕಿಶಾನ್ ವೇಗವಾಗಿ ಬ್ಯಾಟ್ ಬೀಸಿ, 32 ಎಸೆತಗಳಲ್ಲಿ 52 ರನ್ ಗಳಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ನಾಯಕ ಸೂರ್ಯಕುಮಾರ್ 10 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರು.
ಆರಂಭಿಕರಾಗಿ ಕಣಕ್ಕಿಳಿದು ಕೊನೆಯ ಓವರ್ವರೆಗೂ ಕ್ರೀಸ್ನಲ್ಲಿದ್ದ ರುತುರಾಜ್ ಗಾಯಕ್ವಾಡ್ 43 ಎಸೆತಗಳಲ್ಲಿ 58 ರನ್ಗಳಿಸಿ ಔಟಾದರು. 19ನೇ ಓವರ್ನಲ್ಲಿ ಕ್ರೀಸ್ಗೆ ಬಂದ ಭರವಸೆಯ ಆಟಗಾರ ರಿಂಕು ಸಿಂಗ್ ಕೊನೆಯಲ್ಲಿ ಕೇವಲ 9 ಎಸೆತಗಳಲ್ಲಿ 31 ರನ್ ಗಳಿಸಿ ಅಜೇಯರಾಗಿ ಉಳಿದರು. ತಿಲಕ್ ವರ್ಮ ಸಹ 7 ರನ್‌ಗಳ ಕಾಣಿಕೆ ನೀಡಿ ಅಜೇಯರಾಗಿ ಉಳಿದರು.
ತದನಂತರ,ಗುರಿ ಬೆನ್ನಿಟ್ಟಿದ ಆಸ್ಟ್ರೇಲಿಯಾ ತಂಡವನ್ನು 191/9 ರನ್‌ಗಳಿಗೆ ನಿಯಂತ್ರಿಸಿ 44 ರನ್‌ಗಳ ಜಯ ದಕ್ಕಿಸಿಕೊಂಡಿತು. ಭಾರತದ ಪರ ಶಿಸ್ತಿನ ಬೌಲಿಂಗ್ ನಡೆಸಿದ ವೇಗಿ ಪ್ರಸಿಧ್ ಕೃಷ್ಣ ಮತ್ತು ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ತಲಾ 3 ವಿಕೆಟ್ ಪಡೆದು ಭಾರತದ ಗೆಲುವಿಗೆ ಬಲವಾದರು