28 ನವಜೋಡಿಗಳು ಪ್ರತಿಯೊಬ್ಬರೂ ಮೂರು ಮಕ್ಕಳಿಗೆ ಜನ್ಮ ನೀಡಬೇಕು..!
ಇಂಡಿ: ಸರಳ ಸಾಮೂಹಿಕ ವಿವಾಹ ಭಾಗ್ಯವಂತರ ವಿವಾಹ. ಸಾಮೂಹಿಕ ವಿವಾಹ ಶ್ರೇಷ್ಠ ವಿವಾಹ. ಸಾಮೂಹಿಕ ಮದುವೆಗಳು ಅರ್ಥಿಕ ಹೊರೆಯನ್ನು ಕಡಿಮೆ ಮಾಡುವದರ ಜೊತೆಗೆ ಬಡ ಕುಟುಂಬಗಳನ್ನು ಸಂಕಷ್ಟ ದಿಂದ ಪಾರು ಮಾಡುತ್ತದೆ ಎಂದು ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನಮಠದ ಜಗದ್ಗುರು ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಅವರು ಬುಧವಾರ ತಾಲೂಕಿನ ಗೋಳಸಾರ ಗ್ರಾಮದ ಸದ್ಗುರು ಚಿನ್ಮಯಮೂರ್ತಿ ತ್ರಿಮೂರ್ತಿ ಮಹಾಶಿವಯೋಗಿಗಳ ೩೨ ನೆಯ ಪುಣ್ಯ ಸ್ಮರಣೋತ್ಸವ, ಧರ್ಮಸಭೆ, ದೀಪೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಡಿನ ಸಂತ ಶರಣ ಸ್ವಾಮೀಜಿಗಳು ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಪುಣ್ಯವಂತರು. ಈಗ ಮದುವೆಯಾದ ೨೮ ನವಜೋಡಿಗಳು ಪ್ರತಿಯೊಬ್ಬರೂ ಮೂರು ಮಕ್ಕಳಿಗೆ ಜನ್ಮ ನೀಡಬೇಕು. ಒಬ್ಬ ಮಗ ಅಥವಾ ಮಗಳು ಸಮಾಜಕ್ಕಾಗಿ, ಒಂದು ದೇಶಕ್ಕಾಗಿ, ಒಂದು ನಮಗಾಗಿ ಹೀಗೆ ೩ ಮಕ್ಕಳಿಗೆ ಜನ್ಮ ನೀಡಬೇಕೆಂದರು.
ಸಾಲ ಮಾಡಿ ಮದುವೆ ಮಾಡಿಕೊಂಡು ಸಾಲದ ಜೊತೆ ಮಲಗುವುದಕ್ಕಿಂತ, ಸಾಮೂಹಿಕ ಮದುವೆಗಳಲ್ಲಿ ಮದುವೆಯಾಗಿ ಹೆಂಡತಿಯ ಜೊತೆಗೆ ಸುಖ ಸಂಸಾರ ನಡೆಸಬೇಕು. ವರದಕ್ಷಿಣೆ ಪಡೆಯದೇ, ತಂದೆ ತಾಯಿಯ ಆಸ್ತಿಯಲ್ಲಿ ಪಾಲು ಕೇಳದೆ, ಸ್ವಂತ ದುಡಿದು ಎಲ್ಲರನ್ನೂ ಸಾಕುವ ಮಗನೇ ನಿಜವಾದ ಗಂಡಸು ಎಂದರು.
ಒಂದು ಯುವ ಜನಾಂಗ ದುಷ್ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಾವು ಆರೋಗ್ಯವಾಗಿದ್ದರೆ ಮಾತ್ರ ಎಲ್ಲ ಸುಖ ಅನುಭವಿಸಲು ಸಾಧ್ಯವಾಗುತ್ತದೆ. ದುಷ್ಚಟಗಳ ದಾಸರಾದರೆ ನಮ್ಮ ಆರೋಗ್ಯವೂ ಹದಗೆಡುತ್ತದೆ, ಆರ್ಥಿಕವಾಗಿಯೂ ನಾವು ಬಡವರಾಗುತ್ತೇವೆ ಆದ್ದರಿಂದ ಶರೀರ ಕಾಯ್ದುಕೊಳ್ಳಬೇಕೆಂದು ಕರೆ ನೀಡಿದರು.
ಸಾಲೋಟಗಿಯ ಸಿದ್ದೇಶ್ವರ ಆಶ್ರಮದ ಬಸವಲಿಂಗ ಶ್ರೀಗಳು ಮಾತನಾಡಿ ಶ್ರೀ ತ್ರಿಮೂರ್ತಿ ಶ್ರೀಗಳ ಮಹಿಮೆ ಬಹಳಷ್ಟಿದೆ. ನಂಬಿದ ಭಕ್ತರ ಬಾಳು ಬೆಳಗಿದ್ದ ಮಹಾಪವಾಡ ಪುರುಷರು ಶ್ರೀ ತ್ರೀಮೂರ್ತಿ ಮಹಾರಾಜರು ಎಂದರು.
ಯರನಾಳದ ಸಂಗನಬಸವ ಶ್ರೀಗಳು ಮಾತನಾಡಿ ಗೋಳಸಾರ ಮಠ ಸದಾ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕಾರ್ಯಗಳನ್ನು ಕೈಗೊಂಡು ಬಡವರಿಗೆ, ದುರ್ಬಲರಿಗೆ ಸದಾ ಆಸರೆಯಾಗಿ ನಿಂತಿದೆ. ನಿತ್ಯ ದಾಸೋಹ, ಭಕ್ತವರ್ಗಕ್ಕೆ ಪ್ರಸಾದದ ಮೂಲಕ ಶಾಂತಿ ಮಂತ್ರದ ಮೂಲಕ ಮೌನಕ್ರಾಂತಿ ಮಾಡುತ್ತಿರುವ ಅಭಿನವ ಪುಂಡಲಿAಗ ಮಹಾಶಿವಯೋಗಿಗಳು, ವಯಸ್ಸಿನಲ್ಲಿ ಚಿಕ್ಕವರಿದ್ದರೂ ಶರಣ ತತ್ವದಲ್ಲಿ ಮುಂದಿದ್ದಾರೆ. ದಾಸೋಹ ಪೀಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಸರ್ವರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಎ.ಪಿ.ಕಾಗವಾಡಕರ, ರವಿ ಆಳೂರ, ಆದಪ್ಪ ಪಾಸೋಡಿ, ಮಾತನಾಡಿದರು.
ತ್ರಿಮೂರ್ತಿ ಕಾರುಣ್ಯ ಪ್ರಶಸ್ತಿಯನ್ನು ವೈದ್ಯಕೀಯ ವಿಭಾಗದ ಡಾ|| ನಚಿಕೇತ ದೇಸಾಯಿ, ಇತಿಹಾಸ ಸಂಶೋಧಕ ಎ.ಎಸ್.ಪಾಸೋಡಿ, ಸಾವಯುವ ಕೃಷಿಕ ಸುನೀಲ ನಾರಾಯಣಕರವರಿಗೆ ನೀಡಲಾಯಿತು.
ಶ್ರೀಮಠಕ್ಕೆ ೧ ಕೋಟಿ ೩೦ ಲಕ್ಷ ರೂಪಾಯಿ ದಾನಗೈದ ಬಾಬುಗೌಡ ಪಾಟೀಲ ರೋಡಗಿ ಅವರನ್ನು ಶ್ರೀಗಳು ಸತ್ಕರಿಸಿದರು.
ವೇದಿಕೆಯ ಮೇಲೆ ಬಂಥನಾಳದ ವೃಷಭಲಿಂಗ ಶ್ರೀಗಳು, ಪಾನ ಮಂಗಳೂರ ಶಿವಯೋಗಿ ಶಿವಾಚಾರ್ಯರು, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು, ರೋಡಗಿಯ ಅಭಿನವ ಶಿವಲಿಂಗ ಶ್ರೀಗಳು, ಜೈನಾಪುರದ ರೇಣುಕ ಶಿವಾಚಾರ್ಯರು, ಶಿರವಾಳದ ಸೋಮಲಿಂಗ ಮಹಾರಾಜರು, ಅಗರಖೇಡದ ಅಭಿನವ ಪ್ರಭುಲಿಂಗ ಶ್ರೀಗಳು, ಹೊನವಾಡದ ಬಾಬುರಾವ ಮಹಾರಾಜರು, ಮಾಜಿ ಶಾಸಕ ರಮೇಶ ಭೂಸನೂರ, ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ, ವಿಠ್ಠಲಗೌಡ ಪಾಟೀಲ, ಮನೋಹರ ಮಂದೇವಾಲಿ, ಅಪರ ಆಯುಕ್ತರು ಪಂಚಾಯತ್ ರಾಜ್ ಇಲಾಜ್ಯ ಭೀಮಾಶಂಕರ ತೆಗ್ಗೆಳ್ಳಿ, ಭೀಮಣ್ಣ ಕವಲಗಿ, ಬಾಬು ಸಾವಕಾರ ಮೇತ್ರಿ, ಜಗದೀಶ ಕ್ಷತ್ರಿ, ಮಂಜುನಾಥ ವಂದಾಲ, ಅನಂತ ಜೈನ, ದೇವೆಂದ್ರ ಕುಂಬಾರ, ಮತ್ತಿತರಿದ್ದರು.
ಇದೇ ಸಂದರ್ಭದಲ್ಲಿ ೨೮ ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.


















