ರಾಯಚೂರು: ಕಾನೂನು ಬಾಹೀರವಾಗಿ ಬಾಲ ಕಾರ್ಮಿಕ ಪದ್ಧತಿ ನಿರ್ವಹಿಸುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿ, ೨೨ ಜನ ಮಕ್ಕಳನ್ನು ರಕ್ಷಿಸಿ, ನಾಲ್ಕು ವಾಹನಗಳ ಜಪ್ತಿ ಮಾಡಲಾಗಿದೆ. ಜಿಲ್ಲಾ ಬಾಲ ಕಾರ್ಮಿಕ ಯೋಜನೆ, ಶಿಕ್ಷಣ ಇಲಾಖೆ ಮತ್ತು ಮಕ್ಕಳ ರಕ್ಷಣಾ ಘಟಕ ಸಂಯೋಗದಲ್ಲಿ ತಾಲೂಕಿನ ಯರಗೇರಾ, ಇಡಪನೂರು, ಪುಚ್ಚಲದಿನ್ನಿ, ಗಾಣದಾಳ, ಗಿಲ್ಲೇಸೂಗೂರು, ಗುಂಜಳ್ಳಿ ಮತ್ತು ಹಂಚಿನಾಳ ಸ್ಥಳಗಳಲ್ಲಿ ದಾಳಿ ನಡೆಸಿ, ಮಕ್ಕಳನ್ನು ರಕ್ಷಿಸಲಾಗಿದೆ.

ಕಿಶೋರ ಕಾರ್ಮಿಕ ಕಾಯ್ದೆಯಡಿ ತಪಾಸಣೆ ಕೈಗೊಂಡಾಗ ಅನೇಕರು ಕೃಷಿ ಕೆಲಸದಲ್ಲಿ ತೊಡಗಿರುವುದು ಕಂಡು ಬಂದಿತು. ೪ ವಾಹನಗಳಲ್ಲಿ ೨೨ ಮಕ್ಕಳನ್ನು ಸಾಗಿಸಲಾಗುತ್ತಿತ್ತು. ಯೋಜನಾಧಿಕಾರಿ ಮಂಜುನಾಥ, ಸಾರಿಗೆ ನಿರೀಕ್ಷಕರಾದ ಕೃಷ್ಣಮೂರ್ತಿ, ಶಿಕ್ಷಣ ಇಲಾಖೆಯ ಕೃಷ್ಣ, ರವಿಕುಮಾರ, ತಿಕ್ಕಯ್ಯ ಸೇರಿದಂತೆ ಅನೇಕರು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು. ಬಾಲ ಕಾರ್ಮಿಕ ಪದ್ಧತಿ ಅನುಷ್ಠಾನ ಕಾನೂನಾತ್ಮಕವಾಗಿ ನಿರ್ಬಂಧಿಸಲಾಗಿದೆ.
೧೫ ರಿಂದ ೧೮ ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುತ್ತಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಘಟನೆಗಳಲ್ಲಿ ೫೦ ಸಾವಿರ ದಂಡ, ೨ ವರ್ಷ ಜೈಲು ಶಿಕ್ಷೆ ಇರುತ್ತದೆ. ಇಂದು ರಕ್ಷಿಸಲಾದ ೨೨ ಮಕ್ಕಳನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಯಿತು.



















