ರಾಜ್ಯದಲ್ಲಿ ೨.೭೩ ಲಕ್ಷ ಹುದ್ದೆಗಳು ಖಾಲಿ,ಉದ್ಯೋಗ ಭರ್ತಿಗೆ ಆದ್ಯತೆ ಸರ್ಕಾರಕ್ಕೆ ಮನವಿ
ವಿಜಯಪುರ: ರಾಜ್ಯದಲ್ಲಿ ೨.೭೩ ಲಕ್ಷ ಹುದ್ದೆಗಳು ಖಾಲಿ ಇದ್ದು, ಲಕ್ಷಾಂತರ ಉದ್ಯೋಗಿಗಳು ಉದ್ಯೋಗ ನೇಮಕಾತಿಗೆ ಪ್ರಕ್ರಿಯೆ ಎದುರು ನೋಡುತ್ತಿದ್ದಾರೆ, ಆದರೆ ಸರ್ಕಾರ ಈ ವಿಷಯದಲ್ಲಿ ಯಾವ ಗಂಭೀರ ಹೆಜ್ಜೆಯನ್ನೂ ಇರಿಸುತ್ತಿಲ್ಲ ಎಂದು ಎಸ್ ಬಿ ವಿಸ್ಡಂ ಅಕಾಡೆಮಿಯ ಅಧ್ಯಕ್ಷ ಶರಣಯ್ಯ ಭಂಡಾರಿಮಠ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಉದ್ಯೋಗ ಭರ್ತಿಗಾಗಿ ಸಾವಿರಾರು ವಿದ್ಯಾರ್ಥಿಗಳು ಬೀದಿಗೀಳಿದು ಹೋರಾಟ ನಡೆಸಿದ್ದಾರೆ, ಎಲ್ಲ ಜಿಲ್ಲಾ ಕೇಂದ್ರದಲ್ಲಿಯೂ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ, ಆದರೆ ಈ ನ್ಯಾಯಯುತವಾದ ಬೇಡಿಕೆ ಈಡೇರಿಸಬೇಕಾದ ಸರ್ಕಾರಗಳು ಈ ವಿಷಯದಲ್ಲಿ ಗಂಭೀರವಾದ ಹೆಜ್ಜೆಯನ್ನೇ ಇರಿಸುತ್ತಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ, ಉದ್ಯೋಗ ಒದಗಿಸುವುದಾಗಿ ನೀಡಿದ ಭರವಸೆಯನ್ನು ಏಕೆ ಈಡೇರಿಸುತ್ತಿಲ್ಲ, ಇದು ಲಕ್ಷಾಂತರ ಉದ್ಯೋಗಕಾಂಕ್ಷಿಗಳಿಗೆ ತೊಂದರೆ ಸೃಜಿಸಿದೆ.
ರಾಜ್ಯದಲ್ಲಿ ೨.೭೩ ಲಕ್ಷ ಹುದ್ದೆಗಳು ಖಾಲಿ ಇವೆ, ಅದರಲ್ಲಿ ಶಿಕ್ಷಣ ಇಲಾಖೆಯಲ್ಲಿ ೬೯೮೦೦, ಆರೋಗ್ಯ ಇಲಾಖೆಯಲ್ಲಿ ೩೪,೯೦೮, ಗೃಹ ಇಲಾಖೆಯಲ್ಲಿ ೨೩,೫೮೦ ಹೀಗೆ ನಾನಾ ಇಲಾಖೆಯಲ್ಲಿ ಉದ್ಯೋಗ ಖಾಲಿ ಇವೆ, ಅತ್ತ ಖಾಲಿ ಹುದ್ದೆಗಳಿಂದಾಗಿ ಆಡಳಿತ ಯಂತ್ರವೂ ಸೂಸೂತ್ರವಾಗಿ ನಡೆಯುತ್ತಿಲ್ಲ, ಜನಸಾಮಾನ್ಯರಿಗೂ ತಮ್ಮ ಕೆಲಸ ಕಾರ್ಯಗಳಿಗೆ ವಿಳಂಬವಾಗುತ್ತಿದೆ, ಈ ಹಿನ್ನೆಲೆಯಲ್ಲಿ ಸರ್ಕಾರ ವ್ಯರ್ಥವಾಗಿ ಕಾಲಹರಣ ಮಾಡದೇ ಆದ್ಯತೆ ಮೇರೆಗೆ ಉದ್ಯೋಗ ಭರ್ತಿಗೆ ಆದ್ಯತೆ ನೀಡುವ ಮೂಲಕ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡುವಂತೆ ಅವರು ಒತ್ತಾಯಿಸಿದ್ದಾರೆ.


















