ಬಿ.ಎಲ್.ಡಿ.ಇ 115ನೇ ಸಂಸ್ಥಾಪನ ದಿನಾಚರಣೆ..!
ವಿಜಯಪುರ, ಅ. 23: ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿರುವ ಪ್ರಾತಃಸ್ಮರಣೀಯರ ಜನಪರ ಕಾರ್ಯ ಸದಾ ಅಜರಾಮರವಾಗಿರಲಿದೆ ಎಂದು ನಗರದ ಶ್ರೀ ಷಣ್ಮುಖಾರೂಢ ಮಠದ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮೀಜಿ ಹೇಳಿದ್ದಾರೆ.
ಇಂದು ಬುಧವಾರ ನಗರದ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಗ್ರಂಥಾಲಯ ಕಟ್ಟೆದ ಹೊಸ ಸಭಾಂಗಣದಲ್ಲಿ ನಡೆದ ಬಿ.ಎಲ್.ಡಿ.ಇ 115ನೇ ಸಂಸ್ಥಾಪನ ದಿನಾಚರಣೆ ಮತ್ತು ಸಂಸ್ಥೆಯ ಪ್ರತಿಭಾವಂತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂಸ್ಥೆಯನ್ನು ಕಟ್ಟಿರುವ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ, ಬಂಥನಾಳ ಶ್ರೀಗಳು, ದಿ. ಶ್ರೀ ಬಿ. ಎಂ. ಪಾಟೀಲ ಮತ್ತು ಈಗ ಅಧ್ಯಕ್ಷರಾಗಿರುವ ಎಂ. ಬಿ. ಪಾಟೀಲ ಅವರು ಪ್ರಚಾರಕ್ಕಿಂತ ತ್ಯಾಗದಿಂದ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ಶಾಶ್ವತವಾಗಿರಲಿವೆ. ವೃತ್ತಿಯಲ್ಲಿ ವಕೀಲರಾಗಿದ್ದರೂ ಸಾಹಿತ್ಯದ ಬಗ್ಗೆ ರುಚಿ ಹೊಂದಿದ್ದ ಹಳಕಟ್ಟಿಯವರು ಶಿಕ್ಷಣ ಮರಿಚಿಕೆಯಾಗಿದ್ದ ಅಂದಿನ ದಿನಗಳಲ್ಲಿ ಸಮಾಜ, ಸಂಸ್ಕೃತಿ ಮತ್ತು ದೇಶದ ಒಳಿತಿಗಾಗಿ ವಚನ ಸಾಹಿತ್ಯ ಸಂಶೋಧನೆ ನಡೆಸಿ, ಸಂಸ್ಥೆ ಪ್ರಾರಂಭಿಸಿ ಶಿಕ್ಷಣದ ಬೀಜ ಬಿತ್ತಿ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ನಂತರ ಬಂಥನಾಳ ಶ್ರೀಗಳು ಪ್ರವಚನಗಳ ಮೂಲಕ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಿ ಶಿಕ್ಷಣ ಸಂಸ್ಥೆಯನ್ನು ಬೆಳೆಸಿದ್ದಾರೆ. ಹಳಕಟ್ಟಿ, ಬಂಥನಾಳ ಶ್ರೀಗಳು ಹಾಗೂ ಬಿ. ಎಂ. ಪಾಟೀಲರು ಬಿಲ್ವಪತ್ರಿಯ ತ್ರಿದಳಗಳಿದ್ದಂತೆ. ಅವರ ಕೊಡುಗೆ ಸ್ಮರಿಸುತ್ತ ಗೌರವ ನೀಡುವ ಮೂಲಕ ಎಂ. ಬಿ. ಪಾಟೀಲರು ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ಅಷ್ಟೇ ಅಲ್ಲ, ಆಧುನಿಕ ವಿಜಯಪುರ ಜಿಲ್ಲೆಯ ಹರಿಕಾರರಾಗಿದ್ದಾರೆ. ಜನಪ್ರೀಯ ಕೆಲಸಗಳ ಬದಲು ಜನಪರ ಕೆಲಸ ಮಾಡುವ ಮುಂದಿನ ಪೀಳಿಗೆಯೂ ಸ್ಮರಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಜೊತೆಗೆ ಸಮಾಜವನ್ನೂ ಬೆಳೆಸುವ ಮೂಲಕ ಸಮಸಮಾಜವನ್ನು ಬೆಳೆಸುತ್ತಿದ್ದಾರೆ. ಈಗ ಬಿ.ಎಲ್.ಡಿ.ಇ ಜಂಗಮರೂಪಿ ಸಂಸ್ಥೆಯಾಗಿದೆ ಎಂದು ಸ್ವಾಮೀಜಿ ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೋಂಡ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಚಂ. ಇನಾಮದಾರ ಮಾತನಾಡಿ, ಸಮಾಜದ ಒಳಿತಿಗಾಗಿ ಸಮಯ ಮೀಸಲಿಡುವ ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿ ಹಳಕಟ್ಟಿಯವರು ಈ ಸಂಸ್ಥೆಯನ್ನು ಹುಟ್ಟು ಹಾಕಿದರು. ಬಸವನಾಡಿನಲ್ಲಿ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರ ಬೆಳೆಯಲು ಶ್ರಮಿಸಿದರು. ಬಂಥನಾಳ ಶ್ರೀಗಳು ಸಂಸ್ಥೆಯ ಗಟ್ಟಿಯಾಗಿ ಬೆಳೆಯಲು ಆರ್ಥಿಕವಾಗಿ ಶ್ರಮಿಸಿದರೆ, ದಿ. ಬಿ. ಎಂ. ಪಾಟೀಲರು ಉನ್ನತ ಶಿಕ್ಷಣಕ್ಕಾಗಿ ಭದ್ರ ಬುನಾದಿ ಹಾಕಿದರು. ಅಲ್ಲದೇ, ವೃತ್ತಿಪರ ಮತ್ತು ವೈದ್ಯಕೀಯ ವ್ಯವಸ್ಮೆ ಮಾಡಿದರು. ಈಗ ಎಂ. ಬಿ. ಪಾಟೀಲ ಅವರು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವಿಶ್ವವಿದ್ಯಾಲಯದ ಉನ್ನತ ಶಿಕ್ಷಣದವರೆಗೆ ಜಾಗತಿಕ ಸ್ಪರ್ಷ ನೀಡುತ್ತಿದ್ದಾರೆ. ಎಲ್ಲ ಸಮುದಾಯದವರಿಗೂ ಗುಣಮಟ್ಟದ ಶಿಕ್ಷಣ ಕೈಗೆಟಕುವಂತೆ ಮಾಡಿದ್ದಾರೆ. ಸಾಮೂಹಿಕ ಹೊಣೆಗಾರಿಕೆ ಮತ್ತು ಆಂತರಿಕ ಸ್ವಾತಂತ್ರ್ಯ ಸಂಸ್ಥೆಯ ಧ್ಯೇಯವಾಗಿದ್ದು, ಭೌತಿಕ ಸಂಪತ್ತಿಗಿಂತ ನೈತಿಕ ಸಂಪತ್ತು ಬಿ.ಎಲ್.ಡಿ.ಇ ಸಂಸ್ಥೆಯ ನೈಜ ಆಸ್ತಿಯಾಗಿದೆ. ಅವರ ಸಮರ್ಥ ನಾಯಕತ್ವದಲ್ಲಿ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಅಲ್ಲದೇ, ಎಂ. ಬಿ. ಪಾಟೀಲರು ರಾಜ್ಯ ಇಂದು ಕೈಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಕಾರಣರಾಗಿದ್ದಾರೆ ಎಂದು ಹೇಳಿದರು.
ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಅಶೋಕ ವಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಠಮಾನ್ಯಗಳು ಜೋಳಿಗೆ ಹಾಕಿ ಶಾಲೆಗಳನ್ನು ಪ್ರಾರಂಭಿಸದಿದ್ದರೆ ಇಂದು ಯಾರೂ ಸಾಕ್ಷರಸ್ಥರು(ಸಹಿ ಮಾಡುವವರು) ಸಿಗುತ್ತಿರಲಿಲ್ಲ. ಹಳಕಟ್ಟಿ ಅವರ ನಂತರ ಜವಾಬ್ದಾರಿ ವಹಿಸಿಕೊಂಡ ಬಂಥನಾಳ ಶ್ರೀಗಳು ಅಂದು ಸಂಸ್ಥೆಯನ್ನು ಬೆಳೆಸಲುವ ಜವಾಬ್ದಾರಿಯನ್ನು ಬಿ. ಎಂ. ಪಾಟೀಲರಿಗೆ ವಹಿಸಿದ್ದರಿಂದ ಅಭಿವೃದ್ಧಿಯ ಪರ್ವ ಪ್ರಾರಂಭವಾಯಿತು. ನಂತರ ಈಗ ಎಂ. ಬಿ. ಪಾಟೀಲರು ಸಂಸ್ಥೆ ಸಿಹಿಯಾದ ಫಲ ನೀಡಲು ಕಾರಣರಾಗಿದ್ದಾರೆ ಎಂದು ಹೇಳಿದರು.
ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಂದು 10 ಜನ ಶಿಕ್ಷಕರು ಮತ್ತು 80 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 5000 ಶಿಕ್ಷಕರು, 40000 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ 49 ಜನ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಜಮಖಂಡಿ ಆಡಳಿತಾಧಿಕಾರಿ ಎಸ್. ಎಚ್. ಲಗಳಿ, ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ, ಸಂಸ್ಥೆಯ ಆಡಳಿತ ಮಂಡಳಿಯ ನಾನಾ ಪದಾಧಿಕಾರಿಗಳು, ಶಾಲೆ, ಕಾಲೇಜುಗಳ ಪ್ರಾಚಾರ್ಯರ ಉಪಸ್ಥಿತರಿದ್ದರು.
ಸುನೈನಾ ದೇಶಪಾಂಡೆ ಪ್ರಾರ್ಥಿಸಿದರು. ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಬಿ.ಎಲ್.ಡಿ.ಇ ಗೀತೆ ಹಾಡಿದರು. ಡಾ. ನೀತಾ ಮಠಪತಿ ನಿರೂಪಿಸಿದರು. ಡಾ. ಸಂತೋಶ ಚಪ್ಪರ ವಂದಿಸಿದರು.
1 ಮತ್ತು 2 ಬಿ.ಎಲ್.ಡಿ.ಇ ಸಂಸ್ಥಾಪನ ದಿನಾಚರಣೆ :
ವಿಜಯಪುರದಲ್ಲಿ ಬಿ.ಎಲ್.ಡಿ.ಇ 115ನೇ ಸಂಸ್ಥಾಪನ ದಿನಾಚರಣೆ ಮತ್ತು ಸಂಸ್ಥೆಯ ಪ್ರತಿಭಾವಂತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶ್ರೀ ಷಣ್ಮುಖಾರೂಢ ಮಠದ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮೀಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಅರುಣ ಚಂ. ಇನಾಮದಾರ, ಅಶೋಕ ವಾರದ, ಎಸ್. ಎಚ್. ಲಗಳಿ, ಡಾ. ವಿ. ಜಿ. ಸಂಗಮ ಉಪಸ್ಥಿತರಿದ್ದರು.
3 ಮತ್ತು 4 ಬಿ.ಎಲ್.ಡಿ.ಇ ಸಂಸ್ಥಾಪನ ದಿನಾಚರಣೆ :ವಿ
ಜಯಪುರದಲ್ಲಿ ಬಿ.ಎಲ್.ಡಿ.ಇ 115ನೇ ಸಂಸ್ಥಾಪನ ದಿನಾಚರಣೆ ಮತ್ತು ಸಂಸ್ಥೆಯ ಪ್ರತಿಭಾವಂತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಷಣ್ಮುಖಾರೂಢ ಮಠದ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮೀಜಿ ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಅರುಣ ಚಂ. ಇನಾಮದಾರ, ಅಶೋಕ ವಾರದ, ಎಸ್. ಎಚ್. ಲಗಳಿ, ಡಾ. ವಿ. ಜಿ. ಸಂಗಮ ಉಪಸ್ಥಿತರಿದ್ದರು.