ರಾಯಚೂರು : ಜಿಲ್ಲೆಯ ನೂರಾರು ರೈತರು ಮೆಣಸಿನಕಾಯಿ ಬೆಳೆದು ಕಂಗಾಲಾಗಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಈಗ ಕೆಂಪು ಬಣ್ಣದಲ್ಲಿ ಬರಬೇಕಾದ ಮೆಣಸಿನಕಾಯಿ ಬಿಳಿಬಣ್ಣದಲ್ಲಿ ಬಂದಿವೆ.
ರಾಯಚೂರು ಜಿಲ್ಲೆಯಾದ್ಯಂತ ಬೆಳೆಯುತ್ತಿರುವ ಮೆಣಸಿನಕಾಯಿ ಬೆಳೆಗೆ ನಿರಂತರ ಮಳೆ ಮತ್ತು ತಂಪಿನ ವಾತಾವರಣದಿಂದ ಸಾಕಷ್ಟು ಹಾನಿ ತಂದಿದ್ದವು. ಇಷ್ಟೆಲ್ಲಾ ಆದ ನಂತರವೂ ಮೆಣಸಿನಕಾಯಿ ಬೆಳೆ ಕೈಗೆ ಪಡೆಯುವಂತಹ ಕನಸು ರೈತರು ಕಂಡಿದ್ದರು . ಆದರೆ ಕೆಲವರಲ್ಲಿ ಇದು ಸಾಧ್ಯವಾಗಿಲ್ಲ.
ಮೆಣಸಿನಕಾಯಿಯೂ ಕಾರವೂ ಇಲ್ಲ, ಕೆಂಪು ಬಣ್ಣವೂ ಇಲ್ಲದೆ ರೈತರು ಬೆಳೆದ ಮೆಣಸಿನಕಾಯಿಗೆ ಕೇಳುವರೇ ಇಲ್ಲದಂತೆ ಆಗಿದೆ. ಹೀಗಾಗಿ ಕೆಲ ರೈತರು 8 ತಿಂಗಳ ಕಾಲ ಎಕರೆ 80-90 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆದ ಮೆಣಸಿಕಾಯಿ ಬೆಳೆಯನ್ನ ಟ್ರ್ಯಾಕ್ಟರ್ ಮುಖಾಂತರ ನಾಶ ಮಾಡಲು ಮುಂದಾಗಿದ್ದಾರೆ.
ಜಿಲ್ಲೆಯ ರಾಯಚೂರು ಮತ್ತು ದೇವದುರ್ಗ ತಾಲೂಕು ಭಾಗಗಳು ಅತಿ ಹೆಚ್ಚು ಮೆಣಸಿನಕಾಯಿ ಬೆಳೆಯುವಂತಹ ಪ್ರದೇಶಗಳಾಗಿದ್ದು, ರಾಯಚೂರು ತಾಲೂಕಿನ ಭಾಗಶಃ ರೈತರು ಉತ್ತಮ ಮೆಣಸಿನಕಾಯಿ ಬಳೆದಿದ್ದಾರೆ. ಇನ್ನು ಕೆಲ ರೈತರ ಬೆಳೆಗಳು ಸೈನಿಕ ರೋಗಕ್ಕೆ ತುತ್ತಾಗಿ ಹಾಳಾಗಿದೆ. ದೇವದುರ್ಗ ತಾಲೂಕಿನಲ್ಲೂ ಕೂಡ ಇಂಥದೇ ಪ್ರಸಂಗ ನಡೆದಿದೆ. ಬೆಳೆಗಳಿಗೆ ಹೆಚ್ಚು ತಂಪು ಆಗುವುದರಿಂದ ಇಂತಹ ರೋಗ ಹುಟ್ಟುತ್ತದೆ. ಇನ್ನು ಈ ರೋಗ ಬಂದ ತಕ್ಷಣ ಕೀಟಗಳು ಬೆಳೆಯ ಬೇರುಗಳನ್ನು ಕಡಿಯುವುದರಿಂದ ಬೆಳೆ ಹಾಳಾಗುತ್ತದೆ, ನಂತರ ಗಿಡದಲ್ಲಿನ ಮೆಣಸಿನಕಾಯಿ ಬಿಳಿ ಬಣ್ಣಕ್ಕೆ ತಿರುಗಿ ಕಾಯಿಗಳು ಖಾರ ಇಲ್ಲದಂತಾಗುತ್ತದೆ.
ಇದರಿಂದ ರೈತರು ಬೆಳೆದ ಮೆಣಸಿಕಾಯಿ ಕಡಿದು ರಾಶಿ ಹಾಕಿ ಬಿಳಿ ಮತ್ತು ಕೆಂಪು ಬಣ್ಣ ಮೆಣಸಿಕಾಯಿ ಬೇಪರ್ಡಿಸಿವ ಕಾರ್ಯ ನಡೆಸಿದ್ದಾರೆ. ಕೆಂಪು ಮೆಣಸಿನಕಾಯಿಗೆ ಕ್ವಿಂಟಾಲ್‌ಗೆ ಮಾರುಕಟ್ಟೆಯಲ್ಲಿ 15 -16 ಸಾವಿರ ರೂಪಾಯಿ ಇದೆ. ಆದ್ರೆ ಬಿಸಿ ಮೆಣಸಿಕಾಯಿಗೆ 2 ಸಾವಿರಕ್ಕೂ ಯಾರು ಕೇಳುತ್ತಿಲ್ಲ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಇನ್ನು ಮುಖ್ಯ ವಿಚಾರವೆಂದರೆ ಮೆಣಸಿನಕಾಯಿ ಬೆಳೆದ ರೈತರಿಗೆ ಜಿಲ್ಲೆಯಲ್ಲಿ ಮಾರಾಟ ಮಾಡಲು ಒಂದು ಸೂಕ್ತ ಮಾರುಕಟ್ಟೆ ಇಲ್ಲ. ಇದರಿಂದ ರೈತರು ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ, ಕೆಲವರು ಹೊರ ರಾಜ್ಯಗಳಿಗೆ ಹೋಗಿ ಮೆಣಸಿನಕಾಯಿಗಳನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇರೆ ಜಿಲ್ಲೆ ಮತ್ತು ರಾಜ್ಯಗಳಿಗೆ ಹೋದಾಗ ಅಲ್ಲಿ ಬೆಲೆ ಕುಸಿದರೆ ಅನಿವಾರ್ಯವಾಗಿ ವಿಧಿಯಿಲ್ಲದೆ ಅವರು ಹೇಳಿದ ಬೆಲೆಗೆ ಎಣಸಿನಕಾಯಿ ನೀಡಿ ಬರಬೇಕಾದ ಪರಿಸ್ಥಿತಿ ರೈತರಿಗೆ ನಿರ್ಮಾಣವಾಗಿದೆ.
ಹಾಗಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಜಿಲ್ಲೆಯಲ್ಲಿ ಒಂದು ಮೆಣಸಿನಕಾಯಿ ಮಾರಾಟಕ್ಕೆ ಸೂಕ್ತ ಸ್ಥಳ ಗುರುತಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕಿದೆ, ಇದರಿಂದ ಬೆಲೆ ಕಡಿಮೆಯಾದರೂ ನಷ್ಟ ಕಡಿಮೆಯಾಗುತ್ತದೆ ಎಂಬುದು ರೈತರ ಮಾತಾಗಿದೆ.