ಮುದ್ದೇಬಿಹಾಳ:ನಮ್ಮ ದೇಶ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ನೀಡಿ ತನ್ನ ನಾಯಕನನ್ನು ಆರಿಸುವ ಸೌಭಾಗ್ಯ ಕಲ್ಪಿಸಿದರೂ ಇನ್ನೂ ಶೇ೧೦೦ ರಷ್ಟು ಮತದಾನವಾಗದಿರೋದು ದುರದೃಷ್ಟಕರ ಸಂಗತಿ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.
ಇಲ್ಲಿನ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಚುನಾವಣಾ ಆಯೋಗ, ತಾಲೂಕು ಆಡಳಿತ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನ ಕೇವಲ ಹಕ್ಕು ಮಾತ್ರವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಅತ್ಯಂತ ಪ್ರಮುಖ ಕರ್ತವ್ಯವೂ ಹೌದು. ಕೆಲವರು ನನ್ನ ಮತದಿಂದ ಏನು ಬದಲಾವಣೆ ಆಗುತ್ತದೆ ಎಂದು ನಿರ್ಲಕ್ಷ ತೋರಿಸುವದು ತಪ್ಪು. ಒಂದು ಮತವೂ ಫಲಿತಾಂಶವನ್ನು ಬದಲಿಸುವ ಶಕ್ತಿ ಹೊಂದಿದೆ ಎನ್ನುವ ಸತ್ಯವನ್ನು ಪ್ರತಿಯೊಬ್ಬರು ಅರಿಯಬೇಕು. ಚುನಾವಣೆ ಸಮಯದಲ್ಲಿ ಹಣ, ಉಡುಗೊರೆ, ಮಧ್ಯದಂತಹ ಪ್ರಲೋಭೆಗಳಿಗೆ ಒಳಗಾಗದೇ, ಯಾರ ಒತ್ತಡಕ್ಕೂ ಮಣಿಯದೇ ಧೈರ್ಯದಿಂದ ಮತ ಚಲಾಯಿಸಿ ಸುಭದ್ರ ರಾಷ್ಟ್ರ ನಿರ್ಮಿಸುವಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಕೀರ್ತಿ ಚಾಲಕ ಮಾತನಾಡಿ, ೧೮ ವರ್ಷ ತುಂಬಿದ ಪ್ರತಿಯೊಬ್ಬರೂ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿರುವದನ್ನು ಖಚಿತಪಡಿಸಿಕೊಳ್ಳಬೇಕು. ಹೆಸರು ತಿದ್ದುಪಡಿ, ಸೇರ್ಪಡೆ, ವಿಳಾಸ ಬದಲಾವಣೆ ಸೇರಿದಂತೆ ಎಲ್ಲ ಸೇವೆಗಳು ನಿಯಮಿತವಾಗಿ ಲಭ್ಯವಿದ್ದು ಯಾವುದೇ ತಪ್ಪುಗಳಿದ್ದರೆ ತಕ್ಷಣ ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಅತಿಥಿಯಾಗಿದ್ದ ತಾಲೂಕು ಪಂಚಾಯತ್ ಇಓ ವೆಂಕಟೇಶ ವಂದಾಲ ಮಾತನಾಡಿ, ಗ್ರಾಮೀಣ ಪ್ರದೇಶದ ಅಭಿವೃದ್ಧಿ, ಕುಡಿಯುವ ನೀರು, ರಸ್ತೆ, ಸ್ವಚ್ಛತೆ, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವಾರು ವಿಷಯಗಳಲ್ಲಿ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತದಾನದ ಪಾತ್ರ ಅತ್ಯಂತ ಪ್ರಮುಖವಾದದ್ದು. ಪ್ರತಿಯೊಬ್ಬ ಪ್ರಜೆ ತನ್ನ ಪಾತ್ರವನ್ನು ಸರಿಯಾಗಿ ನಿಭಾಯಿಸಿದಲ್ಲಿ ಮಾತ್ರ ಶಕ್ತಿಶಾಲಿ ಪ್ರಜಾಪ್ರಭುತ್ವ ನಿರ್ಮಾಣ ಸಾಧ್ಯ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ ಮತದಾನದ ದಿನ ಮಾತ್ರವಲ್ಲದೇ ಪ್ರತಿದಿನವೂ ನಾಗರಿಕರು ಕಾನೂನು ಅರಿವು ಮತ್ತು ನಾಗರಿಕ ಹೊಣೆಗಾರಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳ ಅರಿವು ಇರದಿದ್ದರೆ ಸಮಾಜದಲ್ಲಿ ಅನ್ಯಾಯ, ಶೋಷಣೆ ಮತ್ತು ವಂಚನೆಗಳಿಗೆ ನಾವೇ ಅವಕಾಶ ಕೊಟ್ಟಂತಾಗುತ್ತದೆ ಎಂದರು.
ನ್ಯಾಯವಾದಿ ಎನ್.ಬಿ.ಮುದ್ನಾಳ ವಿಶೇಶ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಮತದಾನ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಇದೇ ವೇಳೆ ಚುನಾವಣಾ ಕಾರ್ಯದಲ್ಲಿ ಇಎಲ್ಸಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದ ಹಡಲಗೇರಿಯ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರವಿ ಕಟ್ಟಿಮನಿ, ಬಿಎಲ್ಓ ಗಳಾಗಿ ಉತ್ತಮ ಕಾರ್ಯ ನಿರ್ವಹಿಸಿದ ಬಿ.ಎಂ.ಲಮಾಣಿ, ಸಿ.ಕೆ.ಪತ್ತಾರ, ಎಂ.ಕೆ.ಪೂಜಾರ, ರಮೇಶ ತೇಲಿ ಮತ್ತು ವಾಯ್.ಎಸ್.ಯರನಾಳ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ವಿವಿಧ ಸ್ಪರ್ದೆಗಳಲ್ಲಿ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್ ಡಿ ಬಾವಿಕಟ್ಟಿ, ನ್ಯಾ.ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಬಿ.ಗೌಡರ, ದೈಹಿಕ ಶಿಕ್ಷಣಾಧಿಕಾರಿ ಎ.ಜೆ.ದಫೇದಾರ, ನ್ಯಾಯವಾದಿ ಚೇತನ ಶಿವಶಿಂಪಿ, ಉಪನ್ಯಾಸಕರಾದ ಎಸ್.ಎಲ್.ಗುರವ, ಎಸ್.ಕೆ.ಮಾಳಗೊಂಡ, ಬಿ.ಐ. ಬಡಿಗೇರ, ತಾಲೂಕು ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ದಲಾಯತ್ ಮಹಾಂತೇಶ ಹಚರೆಡ್ಡಿ,ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳಾದ ಎಸ್.ಎಂ.ಸಜ್ಜನ, ಮಹೇಶ ಪಾಟೀಲ, ಡಿ.ಎಸ್.ತಳವಾರ, ರವಿ ಮಡಿವಾಳರ, ಕಾರ್ತಿಕ ಪತ್ತಾರ, ಅಜೀತ ಹೂಗಾರ, ಉಮರಫಾಕುಕ ವಾಲೀಕಾರ ಸೇರಿದಂತೆ ಇದ್ದರು.
ವಿದ್ಯಾರ್ಥಿನಿ ಸಾಕ್ಷಿ ಕಂಠಿಮಠ ಪ್ರಾರ್ಥಿಸಿದಳು. ಉಪನ್ಯಾಸಕ ಎಸ್.ಜಿ.ಲೊಟಗೇರಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಚುನಾವಣೆಗಳಲ್ಲಿ ಸ್ಪರ್ದಿಗಳು ಅಥವಾ ಅವರ ಬೆಂಬಲಿಗರು ಗೆಲುವಿನ ಸಲುವಾಗಿ ಮತದಾರರ ಮೇಲೆ ಪ್ರಭಾವ ಬೀರುತ್ತಾರೆ. ಇಂತಹ ಪ್ರಭಾವಗಳಿಗೆ ಬಲಿಯಾಗೋದು ಸಂವಿಧಾನದ ಆಶಯಗಳಿಗೆ ವಿರುದ್ಧ.
–ರವೀಂದ್ರಕುಮಾರ ಕಟ್ಟಿಮನಿ. ಅಧ್ಯಕ್ಷರು ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು.