ದೇಸಾಯಿ ಕಲ್ಲೂರದಲ್ಲಿ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ: ಪಲ್ಲಕ್ಕಿ ಮೆರವಣಿಗೆ, ರಥೋತ್ಸವ ಅದ್ದೂರಿ
ಅಫಜಲಪುರ: ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ಏಪ್ರಿಲ್ 1ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ವೇ. ಗುರುಪಾದಯ್ಯ ಮೇಲಿನಮಠ ಅವರ ನೇತೃತ್ವದಲ್ಲಿ ರುದ್ರಾಭಿಷೇಕ ನೆರವೇರಿತು. ಗ್ರಾಮದ ಸುಮಂಗಲೆಯರಿಂದ ಕುಂಭಾಭಿಷೇಕ ಕಾರ್ಯಕ್ರಮವೂ ಶ್ರದ್ಧಾಭಕ್ತಿಯಿಂದ ನಡೆಯಿತು.
ಗುರುವಾರ ಮುಂಜಾನೆ 10:30ಕ್ಕೆ ಶ್ರೀ ಸಿದ್ದೇಶ್ವರ ಪಲ್ಲಕ್ಕಿ ಮೆರವಣಿಗೆಯು ಭಜನಾ ತಂಡಗಳು, ಕಲ್ಲೂರ ಶಾಲೆಯ ಬಾಲಕರಿಂದ ಕೋಲಾಟ ಹಾಗೂ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಸಾಗಿತು.
ಬಳಿಕ ದೇಶಮುಖ ಮನೆತನದಿಂದ ಪ್ರಾರಂಭವಾದ ಶ್ರೀ ರೇವಣಸಿದ್ದೇಶ್ವರ ಹಾಗೂ ಶ್ರೀ ಸಿದ್ದರಾಮೇಶ್ವರ ಪುರಾಣಗಳು ಶ್ರೀ ವೇ. ಸಿದ್ದಲಿಂಗಯ್ಯ ಶಾಸ್ತ್ರಿಗಳು, ಮಂಜುನಾಥ ತೇರದಾಳ ಗವಾಯಿ ಮತ್ತು ಆಕಾಶವಾಣಿ ಕಲಾವಿದ ಸಿದ್ದಣ್ಣ ಹೂಗಾರ ಅವರ ಸಂಗೀತ-ಸಾಹಿತ್ಯದೊಂದಿಗೆ ಭಕ್ತಿಭಾವದಲ್ಲಿ ನಡೆಯಿತು.
ಸಂಜೆ 6 ಗಂಟೆಗೆ 24ನೇ ವರ್ಷದ ರಥೋತ್ಸವವು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಸಮ್ಮುಖದಲ್ಲಿ ಭವ್ಯವಾಗಿ ನೆರವೇರಿತು. ನಂತರ ಮದ್ದು ಸುಡುವ ಕಾರ್ಯಕ್ರಮವೂ ಜರುಗಿತು.
ಈ ಸಂದರ್ಭದಲ್ಲಿ ಶ್ರೀ ವಿಶ್ವರಾಧ್ಯ ಶಿವಾಚಾರ್ಯರು, ವೇ.ಮೂ. ಗುರುಪಾದಯ್ಯ ಮೇಲಿನಮಠ, ಜಗದೀಶ್ ದೇಶಮುಖ, ಎಸ್.ವೈ. ಪಾಟೀಲ್, ಸಿದ್ದಯ್ಯ ಆಕಾಶಮಠ, ದೇವೇಂದ್ರ ದೇಸಾಯಿ ಕಲ್ಲೂರ, ಬಸಯ್ಯ ಆಕಾಶಮಠ, ಭಗವಂತ್ರಾಯ ಪಂಚಿಕಟ್ಟಿ, ಅಡೇವಪ್ಪ ಪಂಚಿಕಟ್ಟಿ, ಮುತ್ತಪ್ಪ ವರರ್ಗಿ, ಅರುಣಕುಮಾರ ಉಪ್ಪಿನ, ಗುಂಡೇರಾವ್ ದೇಶಮುಖ, ಶಂಕರ ತಳವಾರ, ಶರಣು ಜೇರಟಗಿ, ಮಲ್ಲಿನಾಥ ಪಟೇದಾರ ಸೇರಿದಂತೆ ಗ್ರಾಮದ ಹಿರಿಯರು, ಮುಖಂಡರು ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.


















