ಬಬಲೇಶ್ವರ: ಕೃಷ್ಣಾ ನದಿಯಲ್ಲಿ ದೋಣಿ ಮೂಲಕ ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿ ಮಗುಚಿ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಹತ್ತಿರದ ಕೃಷ್ಣಾ ನದಿಯಲ್ಲಿ ಬುಧವಾರ ನಡೆದಿದೆ. ಬಬಲಾದಿ ಸದಾಶಿವ ಮಠಕ್ಕೆ ದರ್ಶನಕ್ಕೆ ಬಂದಿದ್ದ ಬಾಗಲಕೋಟ ಜಿಲ್ಲೆಯ ಭಕ್ತರು ತೆಪ್ಪದ ಸಹಾಯದಿಂದ ಕೃಷ್ಣಾ ನದಿ ದಾಟುತ್ತಿದ್ದರು. ಈ ಹಂತದಲ್ಲಿ ಸಾಮರ್ಥ್ಯ ಮೀರಿ ಭಕ್ತರು ದೋಣಿ ಏರಿದ್ದರಿಂದ ಕೃಷ್ಣಾ ನದಿ ತೀರದಲ್ಲೇ ಪಲ್ಟಿಯಾಗಿದೆ. ಬಬಲಾದಿಯ ಸದಾಶಿವ ಮಠದ ಜಾತ್ರೆ ಮುಗಿಸಿಕೊಂಡು ಬಬಲಾದಿ ಮತ್ತು ಮುಂಡಗನೂರು ನಡುವೆ ಕೃಷ್ಣಾ ನದಿಯಲ್ಲಿ ದೋಣಿಯಲ್ಲಿ ಭಕ್ತರು ಊರಿಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿತ್ತು.
ತೆಪ್ಪ ವಾಲುತ್ತಲೇ ತೆಪ್ಪದಲ್ಲಿ ಅಂಚಿನಲ್ಲಿ ಕುಳಿತವರು ನದಿಗೆ ಹಾರಿದ್ದು, ಜನರ ಒತ್ತಡಕ್ಕೆ ತೆಪ್ಪ ನದಿಯಲ್ಲಿ ಮಗುಚಿ ಬಿದ್ದಿದೆ. ಆದರೆ ನದಿಗೆ ಬಿದ್ದವರು ಹತ್ತಿರದಲ್ಲೇ ತೀರ ಇದ್ದ ಕಾರಣ ಈಜಿ ದಡ ಸೇರಿದ್ದಾರೆ. ಇದರಿಂದ ದುರಂತ ತಪ್ಪಿದೆ. ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.