ಲಿಂಗಸೂಗೂರು: ವಿದ್ಯಾರ್ಥಿಗಳಲ್ಲಿ ಬೌತಿಕ, ನೈತಿಕ ಹಾಗೂ ಮಾನಸಿಕವಾಗಿ ಸದೃಢವಾಗುವದರ ಜತೆಗೆ ಆತ್ಮ ಸ್ಥೈರ್ಯ ಅವಶ್ಯಕವಾಗಿದೆ ಎಂದು ಲಿಂಗಸುಗೂರು ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರು ಹೇಳಿದರು. ಮುದಗಲ್ ಪಟ್ಟಣದ ಶಾಂತಿನಿಕೇತನ ಪ್ರೌಢ ಶಾಲೆಯಲ್ಲಿ ಬಿಳ್ಕೊಡುಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನ್ಮ ನೀಡಿದ ತಂದೆ, ತಾಯಿ ಹಾಗೂ ಶಿಕ್ಷಣ ಕಲ್ಪಿಸಿ ನಮ್ಮ ಬದುಕು ಕಲಿಸಿದ ಗುರುಗಳನ್ನು ಸ್ಮರಿಸಿಕೊಂಡು ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಹಿರಿಯ ಪತ್ರಕರ್ತ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ: ಶರಣಯ್ಯ ಒಡೆಯರ್ ಮಾತನಾಡಿ ಉನ್ನತ ಸ್ಥಾನಕ್ಕೆ ಹಾಗೂ ಉತ್ತಮ ಸಾಧನೆಗೆ ಸಾಗಬೇಕಾದರೆ ಅಚಲವಾದ ಗುರಿ ಇರಬೇಕು. ಸಾಧನೆಯ ಹಾದಿಯಲ್ಲಿ ಸಾಗುವಾಗ ಆಕರ್ಷಕವಾಗಿ ಕಾಣುವ ಅನೇಕ ಗುರಿ ಇಲ್ಲದ ದಾರಿಗಳು ಕಾಣುತ್ತವೆ. ಆದರೆ ಸರಿಯಾದ ಗುರುಗಳ ಮಾರ್ಗದರ್ಶನ ಪಡೆದು ಸೂಕ್ತವಾದ ಸಾಧನೆಯ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು. ಶಿಕ್ಷಣದ ಜೊತೆಯಲ್ಲಿ ಮೌಲ್ಯವನ್ನು ಅಳವಡಿಕೊಂಡಲ್ಲಿ ವಿದ್ಯಾರ್ಥಿಗಳ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸೈಯದ ಪಾಷಾ ಹುಸೇನ್ ಖಾದ್ರಿ ವಹಿಸಿದ್ದರು. ಇದೆ ವೇಳೆ ನೂತನವಾಗಿ ಕಸಾಪ ಲಿಂಗಸುಗೂರು ತಾಲೂಕ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡೂರು, ಮಾಧ್ಯಮ ಕ್ಷೇತ್ರದಲ್ಲಿ ಪ್ರಶಸ್ತಿ ಪುರಸ್ಕೃತ ಡಾ: ಶರಣಯ್ಯ ಒಡೆಯರ್, ಸಿಆರ್ ಪಿ.ರಾಮಚಂದ್ರಪ್ಪ ಡವಳೆ ಮತ್ತು ಉತ್ತಮ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಶಾಲಾ ಮುಖಂಡರಾದ ಮೈಬೂಬು ಸಾಬ ಕಂದಗಲ್, ಬಂದೇನವಾಜ್ ಬಡಿಗೇರ,
ಮುಖ್ಯ ಶಿಕ್ಷಕ ಶೇಕ್ ಲಿಯಾಕತ್, ಸುಧಾ ಹುಣಚಿಗಿ, ಅಕ್ಕಮಹಾದೇವಿ ಸೇರಿ ಅನೇಕರು ಇದ್ದರು. ಕಾರ್ಯವನ್ನು ಫರ್ವೇಜ್ ಹುಸೇನ್ ನಿರ್ವಹಿಸಿದರು.